ಬೆಂಗಳೂರು: ಪ್ರಗತಿಪರ ಚಿಂತಕರು ಸೇರಿದಂತೆ ಕೆಲ ರಾಜಕೀಯ ನಾಯಕರನ್ನು ಕೊಲ್ಲುವುದಾಗಿ ಬೆದರಿಕೆಯ ಸಂದೇಶವಿರುವ ಮತ್ತೊಂದು ಪತ್ರವನ್ನು ಯಾರೋ ದುಷ್ಕರ್ಮಿಗಳು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ನಿವಾಸಕ್ಕೆ ಪೋಸ್ಟ್ ಮಾಡಿದ್ದಾರೆ.
ಲಲಿತಾ ನಾಯಕ್ ಅವರ ಮನೆಗೆ ಬಂದ ಮೂರನೆಯ ಬೆದರಿಕೆ ಪತ್ರ ಇದಾಗಿದೆ. ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಹಾಗೂ ರಾಜಕೀಯ ನಾಯಕರುಗಳಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಕಪಿಲ್ ಸಿಬಲ್, ಲಲಿತಾ ನಾಯಕ್, ಲೀನಾ, ಮಹುವಾ ಮೊಯಿತ್ರಾ ಸೇರಿದಂತೆ ಹಲವರು ಫೋಟೋವನ್ನು ಬೆದರಿಕೆ ಪತ್ರದಲ್ಲಿ ಅಂಟಿಸಲಾಗಿದೆ. ಇಷ್ಟೇ ಅಲ್ಲದೆ, ಇನ್ನು ಕೆಲವರ ಫೋಟೋ ಸಿಕ್ಕಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇವರು ಅಪ್ಪಟ್ಟ ದೇಶದ್ರೋಹಿಗಳು. ನಮ್ಮ ದೇಶದ ಸೈನಿಕರು, ಪೊಲೀಸರು ಮತ್ತು ನಾಗರಿಕರ ಮೇಲೆ ಇಸ್ಲಾಮಿಕ್ ಮತಾಂಧರು ಹಾಗೂ ಭಯೋತ್ಪಾದಕರು ದಾಳಿ ಮಾಡಿದಾಗ ತುಟಿಯನ್ನೇ ಬಿಚ್ಚುವುದಿಲ್ಲ. ಪಠ್ಯ ಪುಸ್ತಕದಲ್ಲಿ ದೇಶ ಪ್ರೇಮ, ದೇಶ ಭಕ್ತಿ ಹಾಗೂ ನಾಡಭಕ್ತಿಯ ಪಾಠ ಸೇರಿಸುತ್ತೇವೆಂದರೆ ಉರಿದು ಬೀಳುತ್ತಿದ್ದಾರೆ. ಅದಕ್ಕೆ ಇಂತಹ ದುರುಳುರು, ದುರ್ಬುದ್ಧಿಯುಳ್ಳವರು ಮುಂದಿನ ದಿನಗಳಲ್ಲಿ ದುರ್ಮರಣಕ್ಕೀಡಾಗುತ್ತಾರೆ ಎಂದು ಪತ್ರದಲ್ಲಿ ಬೆದರಿಕೆ ಸಂದೇಶವನ್ನು ರವಾನಿಸಲಾಗಿದೆ.
ಕೊಲೆ ಮಾಡುವುದಾಗಿ ದಿನಾಂಕ 16/07/2022 ರಂದು ಸಂಜೆ 3ನೇ ಪತ್ರ ಲಲಿತಾ ನಾಯಕ್ ನಿವಾಸಕ್ಕೆ ಬಂದಿದೆ. ಈ ತಿಂಗಳಲ್ಲಿ 3/07/22 ಹಾಗೂ 7/07/22 ದಿನಾಂಕರಂದು ಬೆದರಿಕೆ ಬಂದಿತ್ತು. ಒಟ್ಟು ಮೂರು ಬೆದರಿಕೆ ಪತ್ರ ಬಂದಿದ್ದರೂ ಪತ್ರ ಬರೆದ ವ್ಯಕ್ತಿಯನ್ನು ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಾಹಿತಿಗಳಿಗೆ ಹಾಗೂ ಪ್ರಗತಿಪರ ಚಿಂತಕರಿಗೆ ಈ ರೀತಿಯಲ್ಲಿ ಮೇಲಿಂದ ಮೇಲೆ ಪತ್ರ ಬರುತ್ತಿದ್ದು ಇದು ಆತಂಕವನ್ನು ಸೃಷ್ಟಿಸುತ್ತಿದೆ. ಆದರೂ ಸರ್ಕಾರ ಇದರ ಬಗ್ಗೆ ಚಿಂತನೆಯನ್ನು ಮಾಡುತ್ತಿಲ್ಲ ಎಂದು ಲಲಿತಾ ನಾಯಕ್ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.