ಬೆಂಗಳೂರು: ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಬೆಳೆ ನಷ್ಟಕ್ಕೆ ಈಡಾಗುವ ರೈತರಿಗೆ ನೀಡಲಾಗುವ ಬೆಳೆ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಮಳೆಯಾಶ್ರಿತ ಪ್ರದೇಶದ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 6,800 ರೂಪಾಯಿಯಿಂದ 13,600 ರೂ.ಗೆ, ನೀರಾವರಿ ಬೆಳೆಗಳಿಗೆ 13,500 ರೂಪಾಯಿಯಿಂದ 25,000 ರೂ.ಗೆ, ಬಹುವಾರ್ಷಿಕ ಬೆಳೆಗಳಿಗೆ 18,000 ರೂ.ನಿಂದ 28,000 ರೂ.ಗೆ ಹೆಚ್ಚಿಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಿದೆ.
ಸರ್ಕಾರದ ಆದೇಶದಂತೆ ಜೂನ್ 1ರಿಂದ ಡಿಸೆಂಬರ್ 31ರವರೆಗೆ ಮಳೆ ಮತ್ತು ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಗರಿಷ್ಠ ಎರಡು ಹೆಕ್ಟೇರ್ಗೆ ಪರಿಹಾರ ನೀಡಲಾಗುವುದು. ಬೆಳೆ ನಷ್ಟದ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಶೀಘ್ರವೇ ಪರಿಹಾರ ವಿತರಣೆ: ಮುಖ್ಯಮಂತ್ರಿ ಭರವಸೆ
ಭಾರೀ ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಈಡಾದ ಜನರಿಗೆ ಪರಿಹಾರ ಹೆಚ್ಚಳ ಮಾಡಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿ ಪ್ರದೇಶಗಳಿಗೆ ಈಗಾಗಲೇ ತೆರಳಿ ಪರಿಹಾರ ನೀಡಲು ವೀಕ್ಷಣೆ ಮಾಡಿದ್ದು ಪರಿಹಾರ ಸಹ ನೀಡಲಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.
ಮೂಲ ಸೌಕರ್ಯಕ್ಕಾಗಿ 500 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮನೆಗಳನ್ನು ಕಟ್ಟಲು ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರದ ಬೆಳೆ ಪರಿಹಾರದ ಮೊತ್ತಕ್ಕಿಂತ ಹೆಚ್ಚು ನೀಡುತ್ತೇವೆ. ಪ್ರವಾಹದ ಸಂದರ್ಭದಲ್ಲಿ ಯಾರು ತೊಂದರೆಗೀಡಾಗಿದ್ದಾರೆ, ಅವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಲಿದೆ. ಆಮೇಲೆ ಸೂಕ್ತವಾದ ಪರಿಹಾರವನ್ನೂ ನಮ್ಮ ಸರ್ಕಾರ ನೀಡಲಿದೆ ಎಂದರು.