ಹಾವೇರಿ : ಸವಣೂರು ತಾಲೂಕಿನ ಇಚ್ವಂಗಿ ಗ್ರಾಮದಲ್ಲಿ ವಿಶಿಷ್ಟ ಘಟನೆಯೊಂದು ಜರುಗಿದೆ. ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿದ್ದಾರೆ. ಪತಿ ತೀರಿಹೋದ ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡಾ ಸಾವಿಗೀಡಾಗಿದ್ದಾರೆ.
ಮಂಗಳವಾರ ರಾತ್ರಿ ಬಸಪ್ಪ ಕಂಬಳಿ (87) ಎಂಬುವರು ಸಾವಿಗೀಡಾಗಿದ್ದರು. ಪತಿಯ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದಿದ್ದ ಪತ್ನಿ ದ್ಯಾಮವ್ವ (80) ಬುಧವಾರ ಬೆಳಗಿನ ಜಾವ ಸಾವಿಗೀಡಾಗಿದ್ದಾರೆ. ಬಸಪ್ಪ ಅವರು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಹೋಗುವಾಗ ಒಬ್ರೇ ಹೋಗೋದು ಅನ್ನೋ ಲೋಕರೂಢಿಯ ಮಾತಿದೆ. ಆದರೆ ಈ ಮಾತು ಸುಳ್ಳಾಗಿಸಿದೆ ಇಲ್ಲೊಂದು ಜೋಡಿ. ಈ ಜೋಡಿ ಸಾವಿನ ದಾರಿಯಲ್ಲೂ ಜೊತೆಯಾಗೇ ಹೊರಟಿದ್ದಾರೆ. 65 ವರ್ಷದ ದಾಂಪತ್ಯ ಜೀವನದಲ್ಲಿ ಕಲಹವೇ ಇರಲಿಲ್ಲ. ವಯಸ್ಸಾದ ನಂತರವೂ ಅವರು ಅನ್ಯೋನ್ಯತೆಯಿಂದ ಇದ್ದರು. ಇದು ಜನುಮದ ಜೋಡಿಯ ಅಮರ ಪ್ರೇಮದ ಕಥೆ ಎಂದು ಗ್ರಾಮಸ್ಥರು ಬಣ್ಣಿಸಿದ್ದಾರೆ.
ವೃದ್ದ ದಂಪತಿಗಳ ಸಾವಿನಲ್ಲೂ ಒಂದಾಗಿದ್ದು ನೋಡಿ ಮರುಗಿದ ಗ್ರಾಮಸ್ಥರು, ಕಣ್ಣೀರು ಹಾಕಿದ್ದಾರೆ.ಮೃತ ವೃದ್ದ ದಂಪತಿಯನ್ನು ಜೋಡಿಯಾಗಿ ಕೂರಿಸಿದ ಕುಟುಂಬಸ್ಥರು, ಅಂತಿಮ ವಿಧಿ ವಿಧಾನ ಮಾಡಿದರು.ವೃದ್ದ ದಂಪತಿ ಸಾವಿಗೆ ಇಡೀ ಊರಿಗೂರೇ ಕಣ್ಣೀರು ಹಾಕಿತು. 65 ವರ್ಷ ಸಾರ್ಥಕ ಜೀವನ ನಡೆಸಿದ್ದ ಅಜ್ಜ- ಅಜ್ಜಿ ಮಕ್ಕಳು, 12 ಮೊಮ್ಮಕ್ಕಳು, ಅಪಾರ ಬಂಧು ಬಳಗ ಅಗಲಿದ್ದಾರೆ.
ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತಿಮ ಸಂಸ್ಕಾರ ಮಾಡಲಾಯ್ತು. ಬಸಪ್ಪ ಕಂಬಳಿ ಹಾಗೂ ದ್ಯಾಮವ್ವಜ್ಜಿ ಪ್ರೀತಿ, ತ್ಯಾಗ, ಕೊನೆಗೆ ಸಾವಿನಲ್ಲೂ ಒಂದಾಗಿದ್ದಕ್ಕೆ ಇಡೀ ಗ್ರಾಮದ ಜನ, ‘ಸಾವೆಂದರೆ ಇಂಥ ಸಾವು ಬರಬೇಕು’ ಅಂತ ಮಾತಾಡಿಕೊಳ್ತಿರೋದು ಕಂಡು ಬಂತು.