ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ

ಶ್ರೀಲಂಕಾ ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸೌದಿ ಏರ್‌ಲೈನ್ಸ್ ಮೂಲಕ ಸಿಂಗಾಪುರಕ್ಕೆ ತೆರಳಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ದ್ವೀಪ ರಾಷ್ಟ್ರದ ಉಂಟಾದ ದಂಗೆಯಿಂದಾಗಿ ಗೋಟಬಯ ರಾಜಪಕ್ಸೆ ಬುಧವಾರ(ಜುಲೈ 13) ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು.

ಶ್ರೀಲಂಕಾದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜಪಕ್ಸೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆ ಭಾಗವಾಗಿ ಶನಿವಾರ(ಜುಲೈ 10) ಅವರ ಅಧ್ಯಕ್ಷೀಯ ಭವನಕ್ಕೆ ಮುತ್ತಿಗೆ ಹಾಕಿದರು.

ರಾಜಪಕ್ಸೆ ಬುಧವಾರ ಬೆಳಗ್ಗೆ ಶ್ರೀಲಂಕಾದಿಂದ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್‌ಗೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಮಾಲ್ಡೀವ್ಸ್‌ನ ಸ್ಪೀಕರ್ ಮೊಹಮ್ಮದ್ ನಶೀದ್ ಸ್ವಾಗತಿಸಿದರು. ರಾಜಪಕ್ಸೆ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಬೇಕಿದ್ದ ದಿನವೇ ದೇಶದಿಂದ ಪಲಾಯನ ಮಾಡಿದ್ದರು.

ಮಾಲ್ಡಿವ್ಸ್‌ ನಿಂದ ಸಿಂಗಾಪುರಕ್ಕೆ ಪ್ರಯಾಣಿಸುವುದಕ್ಕೆ ಖಾಸಗಿ ಜೆಟ್‌ ವಿಮಾನಕ್ಕಾಗಿ ಎದುರು ನೋಡುತ್ತಿರುವ ರಾಜಪಕ್ಸೆ ಮತ್ತು ಅವರ  ಪತ್ನಿ ಐಯೋಮಾ ರಾಜಪಕ್ಸೆ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ಇಂದು ರಾತ್ರಿಯೇ SQ437 ವಿಮಾನದಲ್ಲಿ ತೆರಳಬೇಕಿಗಿತ್ತು. ಆದರೆ ಭದ್ರತಾ ಸಮಸ್ಯೆಗಳಿಂದಾಗಿ ವಿಮಾನ ಪ್ರಯಾಣವನ್ನು ಮುಂದೂಡಿದ್ದರು ಎಂದು ತಿಳಿದು ಬಂದಿದೆ.

ಈಗ ಹಂಗಾಮಿ ಅಧ್ಯಕ್ಷರಾಗಿರುವ ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ನೇಮಕಗೊಂಡ ಬೆನ್ನಲ್ಲೇ ಅಲ್ಲಿನ ಜನ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಕ್ರಮಸಿಂಘೆ ಕಚೇರಿಗೆ ನುಗ್ಗಿ ಜನ ದಾಂಧಲೆ ನಡೆಸಿದ್ದಾರೆ. ಸೇನಾ ಪಡೆಗಳ ಅಶ್ರುವಾಯು ಸೇರಿ ಹಲವು ರೀತಿಯ ಬಲ ಪ್ರಯೋಗಕ್ಕೂ ಬೆದರದೇ ಅಧ್ಯಕ್ಷರ ಭವನದ ಬಳಿಕ ಪ್ರಧಾನಿ ಕಚೇರಿಯನ್ನೂ ಆಕ್ರಮಿಸಿ ಗಲಾಟೆ ಮಾಡಿದ್ದಾರೆ. ಘರ್ಷಣೆಯಲ್ಲಿ ಓರ್ವ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯ ಕಾವು ಮತ್ತಷ್ಟು ಜೋರಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *