ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರುತ್ತಲೇ ಇದ್ದು, ಕೆಆರ್ಎಸ್ ಅಣೆಕಟ್ಟು ಭರ್ತಿಗೆ 1 ಅಡಿಯಷ್ಟೇ ಬಾಕಿ ಇದೆ. ಇದರಿಂದ ರೈತರಿಗೆ ಸಂತಸಗೊಂಡಿದ್ದಾರೆ, ಆದರೆ ಇದೇ ಸಂದರ್ಭದಲ್ಲಿ ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟಿಗೆ 30,216 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರಿಂದ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗುವ ಸ್ಥಿತಿಯಲ್ಲಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟಿಗೆ 124.80 ಅಡಿಗಳಷ್ಟು ಇರುವ ಅಣೆಕಟ್ಟು ಸದ್ಯ 123.20 ಅಡಿಗಳಷ್ಟು ಭರ್ತಿಯಾಗಿದೆ. ಅಣೆಕಟ್ಟು ಭರ್ತಿಗೆ ಇನ್ನೂ ಕ್ಷಣಗಣನೆ ಇರುವ ಕಾರಣ ನದಿಗೆ 106 ಅಡಿ ಮಟ್ಟದ 15 ಗೇಟ್ಗಳ ಮೂಲಕ 25,000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. 49.452 ಟಿಎಂಸಿ ಸಾಂದ್ರತೆ ಇರುವ ಕೆಆರ್ಎಸ್ ನಲ್ಲಿ 47.800 ಟಿಎಂಸಿ ನೀರು ಇದೆ.
ಇಂದು ಅಣೆಕಟ್ಟಿನಿಂದ 25,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗಿದೆ. ಇನ್ನೊಂದೆಡೆ ಸಮೀಪದಲ್ಲೇ ಇರುವ ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯ ಭೀತಿಯಲ್ಲಿದೆ. ಹೀಗಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಬೋಟಿಂಗ್ನ್ನು ಬಂದ್ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮಳೆಯ ಪ್ರಮಾಣ ಹೆಚ್ಚಾಗಿ ನೀರು ಹರಿಬಿಟ್ಟ ಕಾರಣದಿಂದ 40 ಹೆಚ್ಚಿನ ನಡುಗಡ್ಡೆಗಳು ಹಾನಿಗೊಂಡಿದ್ದವು. ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗುವ ಸಂಭವವಿದೆ.
ನೆನ್ನೆ(ಜುಲೈ 09)ಯೂ ಸಹ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಜೊತೆಗೆ ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ನೀರು ಬಿಡುಗಡೆ ಮಾಡಲಾಗುತ್ತಿದೆ. ನದಿ ತೀರದಲ್ಲಿ ವಾಸಿಸುವ ಜನರ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ನಿಗಮದ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.