ರೈಲಿನಲ್ಲಿ ಸಿಕ್ಕಿಬಿದ್ದ ನಕಲಿ ಟಿಕೆಟ್ ಪರೀಕ್ಷಕ

ಮೈಸೂರು: ಟಿಪ್ಪು ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ನಕಲಿ ಸಂಚಾರಿ ಟಿಕೆಟ್ ಪರೀಕ್ಷಕನನ್ನು ರೈಲ್ವೆಯ ಟಿಕೆಟ್ ಪರೀಕ್ಷಕ ಸಿಬ್ಬಂದಿ ಹಿಡಿದಿದ್ದಾರೆ. ರಾಮನಗರ ಜಿಲ್ಲಾ ಕನಕಪುರ ತಾಲೂಕಿನ ಮಲ್ಲೇಶ್ ಬಂಧಿತ ಆರೋಪಿ.

ಮೈಸೂರು-ಬೆಂಗಳೂರು ಸೂಪರ್‍ ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಟಿಕೆಟ್ ಪರೀಕ್ಷಕ ಉಪ ಮುಖ್ಯಸ್ಥ ಪಿ.ಚೇತನ್ ಅವರು ಎಸಿ ಮೆಕ್ಯಾನಿಕ್ ರವಿ ಅವರೊಂದಿಗೆ ಅಪರಾಯು ರೈಲಿನಲ್ಲಿ ನಕಲಿ ರೈಲ್ವೆ ಟ್ಯಾಗ್ ಮತ್ತು ಅರ್ಧ ಸಮವಸ್ತ್ರ ಧರಿಸಿ ವಾಕಿಟಾಕಿಯೊಂದಿಗೆ ಚಲಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ರೈಲಿನಲ್ಲಿ ಆತನ ಉಪಸ್ಥಿತಿ ಮತ್ತು ಗುರುತಿನ ಬಗ್ಗೆ ವಿಚಾರಿಸಿದಾಗ ನಕಲಿ ಟಿಸಿ ಬಣ್ಣ ಬಯಲಾಗಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಆತನನ್ನು ಹಿಡಿದು ಮೈಸೂರು ನಿಲ್ದಾಣದ ಟಿಕೆಟ್ ಲಾಬಿಯಲ್ಲಿರುವ ಟಿಕೆಟ್ ಪರೀಕ್ಷಕರ ಉಸ್ತುವಾರಿ ಸಿ.ಎಸ್. ಭಾಸ್ಕರ್ ಅವರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ಆತ ಪ್ರತಿನಿತ್ಯ ರೈಲಿನಲ್ಲಿ ಸಂಚರಿಸಿ ಟಿಕೆಟ್ ಪರೀಕ್ಷಕ ಎಂದು ಬಿಂಬಿಸಿಕೊಂಡು ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಧರ್ಮಾವರಂ ಮಾರ್ಗಗಳೂ ಸೇರಿದಂತೆ ದೂರ ಪ್ರಯಾಣದ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ. ರೈಲು ಯಾತ್ರಿಕರನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ದಂಡ ವಿಧಿಸಿ ಅಮಾಯಕ ಪ್ರಯಾಣಿಕರಿಂದ ಹಣ ಸಂಗ್ರಹಿಸುತ್ತಿದ್ದ ಎಂದು ತಿಳಿದುಬಂದಿದೆ. ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಕ್ರಿಯೆಯಲ್ಲಿದೆ.

ಪ್ರಯಾಣಿಕರಿಗೆ ಎಚ್ಚರಿಕೆ: ಪ್ರಯಾಣಿಕರು ರೈಲಿನಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಕಂಡುಬರುವ ಯಾವುದೇ ರೀತಿಯ ಅನುಮಾನಾಸ್ಪದ ನಡವಳಿಕೆಯ ವ್ಯಕ್ತಿಯ ಬಗ್ಗೆ ರೈಲ್ವೆ ಆಡಳಿತಕ್ಕೆ-ಸಹಾಯವಾಣಿ/ದೂರು ಸಂಖ್ಯೆ 139 ಅಥವಾ 182ಕ್ಕೆ ಕರೆ ಮಾಡುವಂತೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *