ತಮಿಳುನಾಡು ರಾಜ್ಯವನ್ನು ಎರಡು ಭಾಗ ಮಾಡಬೇಕು: ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್‌

ಚೆನ್ನೈ: ತಮಿಳುನಾಡು ರಾಜ್ಯಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಬೇಕೆಂದು ಆಡಳಿತರೂಢ ಡಿಎಂಕೆ ಪಕ್ಷದ ಮುಖಂಡ ಎ.ರಾಜಾ ಹೇಳಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಬೇಕೆಂದು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಎ.ರಾಜ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಬಿಜೆಪಿಯ ನೈನಾರ್‌ ನಾಗೇಂದ್ರನ್‌ ಇಲ್ಲಿ 234 ವಿಧಾನಸಭಾ ಕ್ಷೇತ್ರಗಳಿವೆ. ಅದನ್ನು 117+117 ಎಂದು ವಿಂಗಡಿಸೋಣ. ನಾವು ದಕ್ಷಿಣ ಮತ್ತು ಉತ್ತರದಲ್ಲಿ ಮುಖ್ಯಮಂತ್ರಿಗಳಾಗುತ್ತೇವೆ. ಅದು ಪಾಂಡಿಯ ನಾಡು ಮತ್ತು ಪಲ್ಲವ ನಾಡು ಆಗಿರುತ್ತದೆ. ನಾವು ಅದನ್ನು ಮಾಡಲು ಸಾಧ್ಯವಿಲ್ಲವೆಂದು ಚಿಂತಿಸಬೇಡಿ. ನಾವು ಅದನ್ನು ಮಾಡಬಹುದಾದ ಸ್ಥಳದಲ್ಲಿದ್ದೇವೆ. ನಮ್ಮ ಪ್ರಧಾನಿ ಮೋದಿ ಅವರಿಂದ ಅದನ್ನು ಮಾಡಲು ಸಾಧ್ಯವಿದೆ ಎಂದು ನೈನಾರ್‌ ನಾಗೇಂದ್ರನ್‌ ಹೇಳಿದ್ದಾರೆ.

ಕೇಂದ್ರ ಮಾಜಿ ಸಚಿವ ಹಾಗೂ ಡಿಎಂಕೆ ಮುಖಂಡ ಎ.ರಾಜಾ ಅವರ ಭಾಷಣ ಕೇಳಿದ ನಂತರ ನನಗೆ ಈ ಉಪಾಯ ಹೊಳೆದಿರುವುದಾಗಿ ತಿಳಿಸಿರುವ ನೈನಾರ್ ನಾಗೇಂದ್ರನ್‌ ಅವರು, ಒಂದು ವೇಳೆ ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಿದಲ್ಲಿ, ನಮಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತರಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಬಿಜೆಪಿ ಅಧಿಕಾರಕ್ಕೆ ಬಂದರೆ, ಹೆಚ್ಚಿನ ಅನುದಾನ ಲಭ್ಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ

ಭಾನುವಾರದಂದು, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಎ.ರಾಜಾ ಅವರು ಸ್ವಾಯತ್ತತೆ ಕುರಿತು ಮಾತನಾಡಿದ್ದು, ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಮುಖ್ಯಮಂತ್ರಿ ಅಣ್ಣಾ ಅವರ ಹಾದಿಯಲ್ಲಿ ಸಾಗುತ್ತಾರೆ, ನಮ್ಮನ್ನು ಪೆರಿಯಾರ್ ದಾರಿಗೆ ತಳ್ಳಬೇಡಿ. ನಾವು ಪ್ರತ್ಯೇಕ ದೇಶದ ಬೇಡಿಕೆ ಇಡುತ್ತಿಲ್ಲ. ನಮಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಎಂದು ತಿಳಿಸಿದ್ದರು.

ತಮಿಳುನಾಡಿನಾದ್ಯಂತ 38 ಜಿಲ್ಲೆಗಳಿದ್ದು 234 ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ರಾಜ್ಯಕ್ಕೆ ಸಂಪೂರ್ಣವಾದ ಸ್ವಾಯತ್ತತೆ ಬೇಕೆಂದು ಕೇಳುತ್ತಿದ್ದೇವೆ ಎಂದಿದ್ದಾರೆ. ನೈನಾರ್‌ ನಾಗೇಂದ್ರನ್‌ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ನಾಯಕ ಟಿಕೆಎಸ್ ಇಲೊಂಗೋವನ್, ಬಿಜೆಪಿ ಅಧಿಕಾರದ ಅಮಲು ಹೊಂದಿದೆ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *