ಚಿಕ್ಕೋಡಿ: ಶಾಲಾ ಆವರಣದಲ್ಲಿದ್ದ ವಿದ್ಯುತ್ ಕಂಬದಲ್ಲಿನ ತಂತಿ ತಗುಲಿ ಶಾಲೆಯಲ್ಲಿಯೇ ಒಂಬತ್ತು ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಡೋಣೆವಾಡಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯ ಅನುಷ್ಕಾ ಸದಾಶಿವ ಬೆಂಡೆ(9) ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದಾಳೆ.
ಘಟನೆಗೆ ಶಾಲೆಯ ಮುಖ್ಯಶಿಕ್ಷಕನ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಶಾಲೆಯ ಮುಖ್ಯಶಿಕ್ಷಕ ಕುಮಾರ್ ನಾಟೇಕರ್ ಅವರನ್ನ ಚಿಕ್ಕೋಡಿ ಡಿಡಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸ್ಥಳೀಯರು ಶಾಲೆಯ ಶೌಲಚಾಯದಲ್ಲಿರುವ ವಿದ್ಯುತ್ ಕಂಬದ ಸಹಾಯ ಪಡೆದು ತಮ್ಮ ಮನೆಗೆ ವಿದ್ಯುತ್ ಕಲ್ಪಿಸಿಕೊಂಡಿದ್ದರಂತೆ. ಮಳೆಗಾಲ ಹಿನ್ನೆಲೆ ಕಂಬದಲ್ಲಿನ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇನ್ನೂ ಶಾಲಾ ಆಡಳಿತ ಮಂಡಳಿ ಹಾಗೂ ನಿಪ್ಪಾಣಿ ಬಿಇಒ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಶಾಲೆಯ ಮುಖ್ಯಶಿಕ್ಷಕ ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಹೊರ ಹೋಗಿದ್ದರಂತೆ. ಹೀಗಾಗಿ ಮುಖ್ಯ ಶಿಕ್ಷಕನ ಈ ನಡೆಯಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹೋಮ್ ವರ್ಕ್ ಮಾಡದಕ್ಕೆ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಶಿಕ್ಷಕ