ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಅವರ ಮೇಲೆ ತಪ್ಪು ಕಲ್ಪನೆ ಮೂಡಿಸುವಂತಹ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಆರೋಪದಡಿ ಬಿಜೆಪಿ ರಾಷ್ಟ್ರಿಯ ವಕ್ತಾರ ರಾಜವರ್ಧನ್ ರಾಥೋಡ್ ಹಾಗೂ ಟಿವಿ ನಿರೂಪಕ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾಂಗ್ರೆಸ್ ಪಕ್ಷದ ರಾಮ್ ಸಿಂಗ್ ಅವರು ಬನ್ಪಾರ್ಕ್ ಪೊಲೀಸರಿಗೆ ದೂರು ಸಲ್ಲಿಸಿದ್ದು, ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ) 505 (ಕ್ರಿಮಿನಲ್ ಬೆದರಿಕೆ) 153ಎ (ಎರಡು ಗುಂಪುಗಳ ನಡುವೆ ಧರ್ಮ, ಜನಾಂಗ, ಹುಟ್ಟಿದ ಸ್ಥಳದ ಆಧಾರದಲ್ಲಿ ದ್ವೇಷವನ್ನು ಉತ್ತೇಜಿಸುವುದು) 295ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವನ್ನು ಹೊಂದಿರುವುದು) ಹಾಗೂ 120ಬಿ (ಕ್ರಿಮಿನಲ್ ಷಡ್ಯಂತ್ರ) ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ತಮ್ಮ ಸುದ್ದಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ತಮ್ಮ ಕೇರಳದ ವಯಾನಾಡ್ ಕಚೇರಿಯಲ್ಲಿ ಎಸ್ಎಫ್ಐ ಹಿಂಸಾಚಾರದ ಬಗ್ಗೆ ಮಾತನಾಡಿದ್ದನ್ನು ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಬಗ್ಗೆ ಮಾತನಾಡಿದ್ದಾರೆ ಎಂಬಂತೆ ಬಿಂಬಿಸಲು ತಿರುಚಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್, ಮೇಜರ್ ಸುರೇಂದ್ರ ಪೂನಿಯ (ನಿವೃತ್ತ) ಹಾಗೂ ಟ್ವಿಟರ್ ನಲ್ಲಿ ರಾಜಕೀಯ ಲಾಭಕ್ಕಾಗಿ ಹಾಗೂ ಸಾರ್ವಜನಿಕರ ಭಾವನೆ ಕೆರಳಿಸುವ ಉದ್ದೇಶದಿಂದ ಇದನ್ನು ಹಂಚಿಕೊಂಡಿದ್ದ ಕಮಲೇಶ್ ಸೈನಿ ಎಂಬಾತನೊಂದಿಗೆ ಸೇರಿ ಮಾಧ್ಯಮ ಸಂಸ್ಥೆ ಷಡ್ಯಂತ್ರ ರೂಪಿಸಿ ರಾಹುಲ್ ಗಾಂಧಿ ಕುರಿತು ತಪ್ಪು ಮಾಹಿತಿ ನೀಡುವಂತೆ ವಿಡಿಯೋವನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿದೆ.