ಬೆಂಗಳೂರು: ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ ಪತ್ರ (ಓಸಿ) ನೀಡುವ ನಿಯಮವನ್ನು ರದ್ದುಗೊಳಿಸಬೇಕೆಂದು ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಒತ್ತಾಯ ಮಾಡುತ್ತಿದ್ದರು. ಇದೀಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಆದೇಶವೊಂದನ್ನು ಹೊರಡಿಸಿದ್ದು, ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿದಾರರು ಸ್ವಾಧೀನ ಪತ್ರ ನೀಡುವ ಅಗತ್ಯವಿಲ್ಲ ಎಂದಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಈ ನಿಯಮಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ತಂದಿದ್ದು, ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ಆದೇಶ ಜುಲೈ 1ರಿಂದಲೇ ಜಾರಿಗೆ ಬರಲಿದೆ. ಇದೀಗ ಸ್ವಾಧೀನ ಪತ್ರ ಹೊಂದಿಲ್ಲದವರೂ ವಿದ್ಯುತ್ ಸಂಪರ್ಕ ಪಡೆಯಬಹುದು. ಇನ್ನುಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ಹಕ್ಕುಪತ್ರ ಇದ್ದರೆ ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ನಾಗರಿಕರಿಗೆ ಕಳೆದ ಐದು ವರ್ಷಗಳಿಂದ ಹೆಚ್ಚಿನ ಸಮಸ್ಯೆಯಾಗಿ ಕಾಡುತ್ತಿತ್ತು. ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಈ ಧೋರಣೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹೊಸ ಅದೇಶದಿಂದಾಗಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಂಧನ ಸಚಿವ ಸುನೀಲ್ ಕುಮಾರ್, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ಕತ್ತಲೆ ಭಾಗ್ಯದ ಕಾನೂನನ್ನು ನಮ್ಮ ಸರಕಾರ ಬದಲಾಯಿಸಿದ್ದು, ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ ಎಂದು ಹೊಸ ಆದೇಶದ ಮಾಹಿತಿ ಹಂಚಿಕೊಂಡಿದ್ದಾರೆ.