ಹೊಸದಿಲ್ಲಿ: ಪತ್ರಕರ್ತರನ್ನು, ಅವರು ಮಾಡಿದ ಬರಹಗಳಿಗೆ, ಟ್ವೀಟ್ಗಳಿಗೆ ಅಥವಾ ಹೇಳಿಕೆಗಳಿಗೆ ಬಂಧಿಸಬಾರದು ಎಂದು ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೋ ಗುಟೆರ್ರೆಸ್ ಅವರ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರ ಬಂಧನದ ಕುರಿತು ಪ್ರತಿಕ್ರಿಯಿಸುವ ಅವರು ಜಗತ್ತಿನಲ್ಲಿ ಎಲ್ಲಿಯೂ ಕೂಡ ಪತ್ರಕರ್ತರನ್ನು ಬಂಧಿಸಬಾರದು ಎಂದು ಹೇಳಿದ್ದಾರೆ.
“ಜಗತ್ತಿನ ಎಲ್ಲಿಯೇ ಆದರೂ ಜನರಿಗೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಲು ಅವಕಾಶವಿರಬೇಕು, ಪತ್ರಕರ್ತರಿಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಾಗೂ ಕಿರುಕುಳದ ಭಯವಿಲ್ಲದೆ ಹೇಳಿಕೊಳ್ಳುವ ಸ್ವಾತಂತ್ರ್ಯವಿರಬೇಕು,” ಎಂದು ವಕ್ತಾರ ಸ್ಟಿಫಾನೆ ದುಜಾರ್ರಿಕ್ ಹೇಳಿದ್ದಾರೆ.
🇮🇳#India: We are very concerned by the arrest and detention of #WHRD @TeestaSetalvad and two ex police officers and call for their immediate release. They must not be persecuted for their activism and solidarity with the victims of the 2002 #GujaratRiots.
— UN Human Rights (@UNHumanRights) June 28, 2022
ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಮಾರ್ಚ್ 2018ರಲ್ಲಿ ಝುಬೈರ್ ಮಾಡಿದ್ದ ಟ್ವೀಟ್ಗೆ ಅವರನ್ನು ಬಂಧಿಸಲಾಗಿತ್ತು. ಅವರ ಟ್ವೀಟ್ಗೆ ಹನುಮಾನ್ ಭಕ್ತ್ ಹೆಸರಿನ ಹ್ಯಾಂಡಲ್ ಹೊಂದಿದ ವ್ಯಕ್ತಿ ಆಕ್ಷೇಪಿಸಿದ್ದರೆಂದು ದಿಲ್ಲಿ ಪೊಲೀಸರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಬಿಜೆಪಿಯ ಸುಳ್ಳಿನ ಮುಖವಾಡ ಕಳಚುತ್ತಿದ್ದ ಪತ್ರಕರ್ತನ ಬಂಧನ
ಝುಬೈರ್ ಬಂಧನವನ್ನು ಅಮೆರಿಕಾ ಮೂಲದ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಕೂಡ ಖಂಡಿಸಿದೆ. “ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ವರದಿ ಮಾಡುವ ಮಾಧ್ಯಮ ಮಂದಿಗೆ ಅಸುರಕ್ಷಿತ ಹಾಗೂ ದ್ವೇಷದ ವಾತಾವರಣವನ್ನು ಸರಕಾರ ಸೃಷ್ಟಿಸಿದೆ ಹಾಗೂ ಈ ಘಟನೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ,” ಎಂದು ಹೇಳಿದೆ.
ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಇದರ ಅಧ್ಯಕ್ಷ ಆಕಾರ್ ಪಟೇಲ್ ಪ್ರತಿಕ್ರಿಯಿಸಿ “ಭಾರತದಲ್ಲಿ ಮಾನವ ಹಕ್ಕುಗಳ ಪ್ರತಿಪಾದಕರು ಎದುರಿಸುತ್ತಿರುವ ಅಪಾಯವನ್ನು ಮುಹಮ್ಮದ್ ಝುಬೈರ್ ಬಂಧನ ತೋರಿಸಿದೆ,” ಎಂದು ಹೇಳಿದ್ದಾರೆ.
2002 ರ ಗುಜರಾತ್ ಗಲಭೆಯಲ್ಲಿ “ಕ್ರಿಮಿನಲ್ ಪಿತೂರಿ, ಫೋರ್ಜರಿ ಮತ್ತು ನ್ಯಾಯಾಲಯದಲ್ಲಿ ಸುಳ್ಳು ಪುರಾವೆಗಳನ್ನು ಇರಿಸಿ ಅಮಾಯಕರನ್ನು ಬಂಧಿಸಿದ” ಆರೋಪದ ಮೇಲೆ ಗುಜರಾತ್ ಅಧಿಕಾರಿಗಳು ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಜುಬೇರ್ ಬಂಧನವಾಗಿದೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಅವರೊಟ್ಟಿಗೆ ನಾನು ನಿಲ್ಲುತ್ತೇನೆ, ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದು ಗುಟೆರ್ರೆಸ್ ವಕ್ತಾರರು ತಿಳಿಸಿದ್ದಾರೆ.