ಅರಸೀಕೆರೆ: ಸ್ಥಳೀಯ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಕ್ಷದ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದು ಪಕ್ಷದ ಹಲವು ಕಾರ್ಯಕ್ರಮಗಳಿಂದ ಹೊರಗುಳಿಗಿದ್ದಾರೆ. ಇದರ ನಡುವೆಯೇ 2023ಕ್ಕೆ ಜನತಾ ಸರ್ಕಾರ, ದಳಪತಿಗಳು, ಕನ್ನಡ ನಾಡಿನ ಜೆಡಿಎಸ್ ಪಡೆ, ವಿಜಯಪುರ ಜೆಡಿಎಸ್ ಮೊದಲಾದ ಸಾಮಾಜಿಕ ಜಾಲಾತಾಣದ ಗುಂಪುಗಳಿಂದ ಹೊರ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಶಿವಲಿಂಗೇಗೌಡರು, ಪಕ್ಷದಿಂದ ಹೊರ ನಡೆಯುವ ಎಲ್ಲಾ ಸಿದ್ಧತೆಗಳನ್ನು ಒಂದೊಂದಾಗಿ ಮಾಡಿಕೊಳ್ಳತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲ, ಪಕ್ಷ ತೊರೆಯುವುದು ಪಕ್ಕಾ ಎಂಬ ಅನುಮಾನ ಮತ್ತಷ್ಟು ಬಲಗೊಳ್ಳುತ್ತಿದೆ.
ವಿಧಾನ ಪರಿಷತ್ ಚುನಾವಣೆ ಬಳಿಕ ಕಳೆದ ಕೆಲ ತಿಂಗಳು ದಿನಗಳಿಂದ ಜೆಡಿಎಸ್ ನಾಯಕರ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಇದರ ನಡುವೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಎಂ ಶಿವಲಿಂಗೇಗೌಡ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.
ಇಷ್ಟೆಲ್ಲ ಆದ ಬಳಿಕವೂ ಒಂದು ರೀತಿಯಲ್ಲಿ ಮೌನಕ್ಕೆ ಶರಣಾಗಿದ್ದ ಕೆ ಎಂ ಶಿವಲಿಂಗೇಗೌಡ ಇದೀಗ ಹೆಚ್ಚು ಅಂತರ ಕಾಯ್ದಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನು ಸಕ್ರಿಯವಾಗಿರದ ಶಿವಲಿಂಗೇಗೌಡರು, ತಮ್ಮ ವಿರುದ್ಧ ಏನೇ ಸುದ್ದಿ ಬಂದರೂ ಅದರ ಬಗ್ಗೆ ನನಗೇನು ಮಾಹಿತಿ ಇಲ್ಲ. ವಾಟ್ಸಾಪ್ ಗುಂಪುಗಳ ಬಳಕೆ ಬಗ್ಗೆ ನನಗೆ ತಿಳುವಳಿಕೆ ಕಡಿಮೆ ಎಂದು ಹೇಳುತ್ತಿದ್ದರು. ಆದರೀಗ ಜೆಡಿಎಸ್ನ ಪ್ರಮುಖ ನಾಯಕರು, ಕೆಲ ಶಾಸಕರು ಹಾಗೂ ಶಾಸಕರ ಆಪ್ತ ಕಾರ್ಯದರ್ಶಿಗಳಿರೋ ನಾಲ್ಕೈದು ಗುಂಪುಗಳಿಂದ ಅವರು ಹೊರ ನಡೆದಿರುವುದು ಗಮನಿಸಿದರೆ ಪಕ್ಷ ತೊರೆಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಶಿವಲಿಂಗೇಗೌಡ ಮಹಾನ್ ನಾಟಕಕಾರ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಶಾಸಕರು, ನಾನೇಕೆ ನಾಟಕ ಮಾಡಲಿ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು.
ಅಷ್ಟೇ ಅಲ್ಲ, ಈಗ ಜೆಡಿಎಸ್ ಶಾಸಕನಾಗಿದ್ದೇನೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ 2023 ರ ಚುನಾವಣೆ ವೇಳೆಗೆ ಅವರು ಪಕ್ಷ ಬದಲಿಸುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
Badavarige jaagaillavee in India
Honesty person will be greater than God