ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕ ಹಿಂಪಡೆಯಲು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಆಗ್ರಹ

ಬೆಂಗಳೂರು: ಪ್ರಸಕ್ತ ಸಾಲಿನ ಪಠ್ಯ ಪುಸ್ತಕದ ಪರಿಷ್ಕರಣೆಯಲ್ಲಿ ಎದ್ದಿರುವ ವಿಚಾರದ ಬಗ್ಗೆ ಜೆಡಿ(ಎಸ್‌) ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಮರು ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ನೇಮಿಸಿದ ಸಮಿತಿಯ ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿರುತ್ತಾರೆ. ನಾಡಗೀತೆಯನ್ನು ಅಸಭ್ಯವಾಗಿ ತಿರುಚಿದವರಿಗೆ ಬಹುಮಾನ ನೀಡುತ್ತೇನೆಂದು ಹೇಳಿದ್ದು ಕೂಡ, ಕುವೆಂಪು ಅವರಿಗೆ ಮಾಡಿದ ದೊಡ್ಡ ಅವಮಾನವೇ ಆಗಿದೆ. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದೂ ನಾಡ ಅಸ್ಮಿತೆಗೆ ಮಾಡಿದ ಅವಮಾನವಾಗಿದೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಠ್ಯಪುಸ್ತಕಗಳ ಮರು ಪರಿಷ್ಕರಣೆಯಲ್ಲಿ ಆಗಿರುವ ಅನ್ಯಾಯಗಳನ್ನು ಖಂಡಿಸಿ ಜೂನ್‌ 18ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿರುವ ಬಗ್ಗೆ ಉಲ್ಲೇಖಿಸಿರುವ ಅವರು, ʻʻವಿಶ್ವಮಾನವ ಕುವೆಂಪು ಹೋರಾಟ ಸಮಿತಿʼʼ ಮಂಡಿಸಿದ ಹಕ್ಕೊತ್ತಾಯಗಳನ್ನು ಬೆಂಬಲಿಸಿ, ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪಠ್ಯ ಪುಸ್ತಕದ ಮರು ಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳಂತೂ ಅಸಂಖ್ಯಾತ. ಕುವೆಂಪು ಅವರೊಂದಿಗೆ, ಡಾ.ಅಂಬೇಡ್ಕರ್‌ ಅವರನ್ನೂ ಹಂಗಿಸಿದವರನ್ನು ಪಠ್ಯಪುಸ್ತಕ ಪರಿಷ್ಕರಣೆ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದ್ದು ಮೊದಲ ತಪ್ಪಾಗಿದೆ.

ಸಮಾಜ ವಿಜ್ಞಾನ ಪಠ್ಯಪುಸ್ತಕದ ಏಕೀಕರಣದ ಪಾಠದಿಂದ ಕುವೆಂಪು ಅವರ ಭಾವಚಿತ್ರ ತೆಗೆಯಲಾಗಿದೆ. ಬಸವಣ್ಣನವರ ಚಳವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ. ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್‌ ಅವರಿಗೆ ʻಸಂವಿಧಾನ ಶಿಲ್ಪಿʼ ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫರಂತಹ ಮಹಾನ್‌ ದಾರ್ಶನಿಕ ಸಂತರ ಪಠ್ಯಗಳನ್ನು ತೆಗೆದು ಹಾಕಿರುವ ಬಗ್ಗೆ ಹೆಚ್‌.ಡಿ.ದೇವೇಗೌಡ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

 

ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸುವುದರೊಂದಿಗೆ, ಡಾ. ಅಂಬೇಡ್ಕರ್‌ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಣಿಗಣಿಸಿರುವುದು ಪುನರ್‌ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಠ್ಯಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ತಪ್ಪೋಲೆ ಅಥವಾ ಪ್ರತ್ಯೇಕ ಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಪುನರ್‌ ಪರಿಷ್ಕರಣೆಯ ಪಠ್ಯಪುಸ್ತಕಗಳನ್ನು ವಾಪಸ್ಸು ಪಡೆದು, ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ದೇವೇಗೌಡರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *