“ನಿರುದ್ಯೋಗಿ ಯುವಜನರ ಆಕಾಂಕ್ಷೆಗಳನ್ನು ಗುರುತಿಸಿ-ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಿ” : ಎಐಕೆಎಸ್

ಜೂನ್ 21ರಂದು ದೇಶಾದ್ಯಂತ ಕೃಷಿ ಕೂಲಿಕಾರರ ಸಂಘದೊಂದಿಗೆ ಶಾಂತಿಯುತ ಪ್ರತಿಭಟನೆಗೆ ಕರೆ

ದೇಶದ ಸಶಸ್ತ್ರ ಪಡೆಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತರಬೇಕೆಂದಿರುವ “ಅಗ್ನಿಪಥ್” ಯೋಜನೆ ದೇಶವಿರೋಧಿ ಮತ್ತು ಜನವಿರೋಧಿ ನಡೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಖಂಡಿಸಿದೆ. ಇದು -ಸಶಸ್ತ್ರ ಪಡೆಗಳಲ್ಲಿ ಉದ್ಯೋಗಗಳ ಕ್ಯಾಶುವಲೀಕರಣವನ್ನು ಕಳ್ಳತನದಿಂದ ತರಬೇಕೆಂದಿರುವುದನ್ನು ಅತಿ-ರಾಷ್ಟ್ರವಾದೀ ವಾಕ್ಚಾತುರ್ಯದಿಂದ ಮರೆಮಾಚುವ ಯೋಜನೆ ಎಂಬುದು ತನ್ನ ದೃಢ ಅಭಿಪ್ರಾಯ ಎಂದಿರುವ ಎಐಕೆಎಸ್, ಇದು ಭಾರತದ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ತನ್ನ ವೈಫಲ್ಯವನ್ನು ಮರೆಮಾಚುವ ಹತಾಶ ಪ್ರಯತ್ನ ಕೂಡ ಆಗಿದೆ ಎಂದು ಹೇಳಿದೆ. ಇದು ಸಶಸ್ತ್ರ ಪಡೆಗಳಲ್ಲಿ ವೃತ್ತಿಪರತೆ, ಉದ್ಯೋಗದ ಗುಣಮಟ್ಟ ಮತ್ತು ದಕ್ಷತೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಲಿದೆ. ಪ್ರತಿಭಟನಾಕಾರರ ವಿರುದ್ಧ ಬಿಜೆಪಿ-ಆರ್‌ಎಸ್‌ಎಸ್ ಅಪಪ್ರಚಾರ ನಡೆಸುತ್ತಿವೆ ಮತ್ತು ಸರಕಾರ ವಿವೇಚನಾರಹಿತ ಬಲಪ್ರಯೋಗದಿಂದ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಎಐಕೆಎಸ್ ಬಲವಾಗಿ ಖಂಡಿಸಿದೆ. ಈ ಕ್ರಮವು ಸುರಕ್ಷಿತ ಉದ್ಯೋಗಗಳನ್ನು ಪಡೆಯುವ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಲಕ್ಷಾಂತರ ನಿರುದ್ಯೋಗಿ ಯುವಕರ ಆಕಾಂಕ್ಷೆಗಳನ್ನು ಅವಮಾನಿಸುವ ಈ ನಡೆ, ನಮ್ಮ ದೇಶದ ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುತ್ತದೆ ಕೂಡ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.

2014ರಲ್ಲಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಸರಕಾರ ಇದೀಗ ಪಿಂಚಣಿ ನೀಡದೆ ನಿಗದಿತ ಅವಧಿಯ ಒಪ್ಪಂದ (ನಾಲ್ಕು ವರ್ಷ) ಘೋಷಣೆ ಮಾಡುವ ಮೂಲಕ ನಿರುದ್ಯೋಗಿ ಯುವಕರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದೆ. ಐತಿಹಾಸಿಕವಾಗಿ ಸಶಸ್ತ್ರ ಪಡೆಗಳಲ್ಲಿ ಇರುವ ಸೈನಿಕರಲ್ಲಿ ಬಹುಪಾಲು ರೈತ ಕುಟುಂಬಗಳಿಂದ ಬಂದಿರುವ ಯುವಕರು. ರೈತರು ಮತ್ತು ಸಶಸ್ತ್ರ ಪಡೆಗಳ ನಡುವಿನ ಈ ಐತಿಹಾಸಿಕ ಮತ್ತು ಸಾವಯವ ಸಂಬಂಧ ಕಠೋರವಾದ ಕೃಷಿ ಕಾನೂನುಗಳ ವಿರುದ್ಧ ಐತಿಹಾಸಿಕ ರೈತರ ಹೋರಾಟಕ್ಕೆ ಹಲವಾರು ಸೇವೆಯಲ್ಲಿರುವ ಮತ್ತು ನಿವೃತ್ತ ಸಶಸ್ತ್ರ ಸಿಬ್ಬಂದಿಗಳು ವ್ಯಕ್ತಪಡಿಸಿದ ಬಹಿರಂಗ ಮತ್ತು ಆಂತರಿಕ ಬೆಂಬಲದಲ್ಲಿ ಸ್ಪಷ್ಟವಾಗಿದೆ.

ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಈಗಾಗಲೇ ಪ್ರಭುತ್ವ ಪ್ರಾಯೋಜಿತ ಫ್ಯಾಸಿಸ್ಟ್ ಹಿಂಸಾಚಾರದ ರೋಗ ತಟ್ಟಿರುವ  ಭಾರತೀಯ ಸಮಾಜದ ಮಿಲಿಟರೀಕರಣಕ್ಕೆ “ಅಗ್ನಿಪಥ್” ಯೋಜನೆಯು ಅನುವು ಮಾಡಿಕೊಡುತ್ತದೆ ಎಂಬುದು ತನ್ನ ಗಂಭೀರ ಕಳವಳ ಎಂದಿರುವ ಎಐಕೆಎಸ್, ಆರೆಸ್ಸೆಸ್ ಸಿದ್ಧಾಂತಿ ಸಾವರ್ಕರ್ ಅವರ ರಾಷ್ಟ್ರದ ಹಿಂದೂಕರಣ ಮತ್ತು ಹಿಂದೂಗಳ ಮಿಲಿಟರಿಕರಣದ ಪರಿಕಲ್ಪನೆಯಿಂದ ನಡೆಯುತ್ತಿರುವ ಬಿಜೆಪಿ ಸರ್ಕಾರವು ಸುರಕ್ಷಿತ ಉದ್ಯೋಗವನ್ನು ಹುಡುಕುತ್ತಿರುವ ಮುಗ್ಧ ಯುವಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತ, ಕೇಂದ್ರ ಸರ್ಕಾರವು ಗಿಮಿಕ್‌ಗಳ ಬದಲಿಗೆ ನಿರುದ್ಯೋಗ ಸಮಸ್ಯೆ ಮತ್ತು ಗ್ರಾಮಾಂತರದಲ್ಲಿನ ಕೃಷಿ ಬಿಕ್ಕಟ್ಟನ್ನು ವೈಜ್ಞಾನಿಕವಾಗಿ ಪರಿಹರಿಸಬೇಕು ಎಂದು ಒತ್ತಾಯಿಸಿದೆ. ರೈಲ್ವೆ, ವಿಶ್ವವಿದ್ಯಾನಿಲಯ ಮುಂತಾದ ವಿವಿಧ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನೇಮಕಾತಿ ನಿಷೇಧವನ್ನು ಸಹ ಹಿಂಪಡೆಯಬೇಕು ಎಂದೂ ಅದು ಆಗ್ರಹಿಸಿದೆ.

ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರದ ಪ್ರಚೋದನೆಗೆ ಒಳಗಾಗದೆ 2022 ರ ಜೂನ್ 21 ರಂದು ಈ ಮೋಸದ ಯೋಜನೆಯ ವಿರುದ್ಧ ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳನ್ನು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ(ಎಐಎಡಬ್ಲ್ಯುಯು)ದ ಜೊತೆಗೆ ನಡೆಸಬೇಕು ಎಂದು ಎಐಕೆಎಸ್ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *