- ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯಗಳನ್ನು ಹಿಂಪಡೆಯಬೇಕು, ಹಿಂದಿನ ಪಠ್ಯಗಳನ್ನೇ ವಿತರಿಸಲು ಆಗ್ರಹ
- ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜಿನಾಮೆಗೆ ನೀಡಬೇಕು
- ಪಠ್ಯಕ್ರಮ ಗೊಂದಲದಿಂದ ಆಗಿರುವ ನಷ್ಟವನ್ನು ಭರಿಸಬೇಕು
ಬೆಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ಹೆಸರಿನಲ್ಲಿ ನಾಡಿಗೆ ಮಾಡಿರುವ ಅವಮಾನ ಹಾಗೂ ಮಹಾನ್ ನಾಯಕರ ವಿಚಾರಗಳನ್ನು ಪಠ್ಯಕ್ರಮದಲ್ಲಿ ತಿರುಚಿ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ವಿಶ್ವಮಾನವ ಕ್ರಾಂತಿಕಾರಿ ಮಾಹಾಕವಿ ಕುವೆಂಪು ಹೋರಾಟ ಸಮಿತಿ-ಕರ್ನಾಟಕದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಜೂನ್ 18ರ ಶನಿವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೇಂದ್ರ ರೈಲ್ವೇ ನಿಲ್ದಾಣದಿಂದ ಮರವಣಿಗೆ ಪ್ರಾರಂಭವಾಗಲಿದ್ದು ಫ್ರೀಡಂ ಪಾರ್ಕ್ನಲ್ಲಿ ಸಮಾವೇಶಗೊಳ್ಳಲಿದೆ. ಈ ಬೃಹತ್ ಹೋರಾಟಕ್ಕೆ 1 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಸಮುದಾಯದ ಮಠಗಳ ಸ್ವಾಮೀಜಿಗಳು, ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು, ದಲಿತ ಸಮುದಾಯದ ಸಂಘಟನೆಗಳು, ಅಲ್ಪಸಂಖ್ಯಾತ ಸಮುದಾಯ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಕೀಲರ ಒಕ್ಕೂಟಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಹೋರಾಟ ಸಮಿತಿಯು ತಿಳಿಸಿದೆ.
ಪಠ್ಯ ಮರು ಪರಿಷ್ಕರಣೆ ವಿಚಾರವದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಾದ ವಿವಾದ ದೇಶದ ಗಮನ ಸೆಳೆದಿದೆ. ರಾಜ್ಯದಲ್ಲಷ್ಟೆ ಅಲ್ಲದೆ ದೇಶದ ಸಾಹಿತಿಗಳು, ಪ್ರಗತಿಪರರು, ಚಿಂತಕರು, ಶಿಕ್ಷಣ ತಜ್ಙರು ಪಠ್ಯ ಕೇಸರಿಕರಣದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಪಠ್ಯ ಪರಿಷ್ಕರಣೆ ವಿರೋಧಿಸಿ ರಾಜ್ಯವ್ಯಾಪಿ ಹೋರಾಟಗಳು, ವಿಚಾರ ಸಂಕಿರಣಗಳನ್ನು ನಡೆಸಲಾಯಿತು. ಲೇಖನ, ಕಥೆ, ಕವನ, ಪ್ರಬಂಧಕ್ಕೆ ಸಾಹಿತಿಗಳು ನೀಡಿದ್ದ ಅನುಮತಿಯನ್ನು ವಾಪಸ್ಸ ಪಡೆಯುವ ಮೂಲಕ ಪ್ರತಿಭಟನೆಯ ಕಾವನ್ನು ಹೆಚ್ಚಿಸಿದರು. ಸಾಲು ಸಾಲು ಸಭೆಗಳ ಮೂಲಕ ತೀವೃ ವಿರೋಧ ಬಂದ ಹಿನ್ನಲೆಯಲ್ಲಿ ರಾಜ್ಯ ಸರಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿತ್ತು. ಅವರ ಸಮಿತಿ ಪರಿಷ್ಕರಿಸಿದ್ದ ಪಾಠಕ್ಕೆ ಬಂದ ಆಕ್ಷೇಪಗಳನ್ನು ಸರಿ ಮಾಡುವುದಾಗಿ ರಾಜ್ಯ ಸರಕಾರ ಹೇಳಿಕೆ ನೀಡಿತ್ತು. ಈ ಸಮಿತಿ ವಿಸರ್ಜಿಸುವುದಷ್ಟೆ ಅಲ್ಲ, ಆ ಪಠ್ಯಕ್ರಮಗಳನ್ನು ಮಕ್ಕಳಿಗೆ ಬೋಧಿಸಬೇಡಿ, ಹಿಂದಿನ ಸಮಿತಿಯನ್ನ ಪಠ್ಯಗಳನ್ನೆ ಮುಂದುವರಿಸಬೇಕು ಎಂಬುದು ಚಿಂತಕರ, ಸಾಹಿತಿಗಳ, ವಿದ್ಯಾರ್ಥಿ, ಪೋಷಕರ ಸಂಘಟನೆಗಳ ಆಗ್ರಹವಾಗಿತ್ತು.
ಇದನ್ನೂ ಓದಿ :ಮಕ್ಕಳ ಭವಿಷ್ಯ ಕಸಿದ ಶಿಕ್ಷಣ ಸಚಿವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ : ಇಲ್ಲಿವೆ 6 ಕಾರಣಗಳು
ವಿವಾದವೇನು : ಹಿಂದಿನ ಪಠ್ಯದಲ್ಲಿ ವಿಷಯಗಳನ್ನು ಮರೆಮಾಚಲಾಗಿದೆ ಎಂದು ಆರೋಪಿಸಿ, ಯಾರಿಗೂ ಗೊತ್ತಾಗದಂತೆ ರೋಹಿತ್ ಚಕ್ರತೀರ್ಥ ನೇತ್ವದಲ್ಲಿ ಸಮಿತಿಯನ್ನು ರಚಿಸಿ ಪಠ್ಯ ಪುಸ್ಕತ ಪರಿಷ್ಕರಣೆಗೆ ರಾಜ್ಯ ಸರಕಾರ ಸೂಚನೆ ನೀಡಿತ್ತು. ಸಿಕ್ಕಿದ್ದೆ ಅವಕಾಶ ಎಂದು ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯದಲ್ಲಿ ಒಂದೇ ಧರ್ಮದ ವಿಚಾರಗಳನ್ನು ತುರುಕುವ ಕೆಲಸ ಮಾಡಿದರು. ಸಮಾಜ ಸುಧಾರಕರಾದ ನಾರಾಯಣ ಗುರು ಪಾಠವನ್ನು, ಸ್ವಾತಂತ್ರ್ಯ ಹೋರಾಟದ ಧ್ರುವತಾರೆಯಾದ ಭಗತ್ ಸಿಂಗ್ರ ಪಾಠವನ್ನು ಕನ್ನಡದ ಸಾಹಿತ್ಯಿಕ ನೆಲೆಯ ಬಹುಮುಖ್ಯ ಭಾಗವಾಗಿರುವ ಪಿ.ಲಂಕೇಶ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣರ ಪಠ್ಯಗಳನ್ನು ತೆಗೆದು ಆ ಜಾಗಕ್ಕೆ ಬ್ರಾಹ್ಮಣರ ಪಠ್ಯಗಳನ್ನೇ ಹಾಕಲಾಗಿದೆ.
“ಕುವೆಂಪು ಆದಿಯಾಗಿ ಬುದ್ಧ ಮಹಾವೀರ ಬಸವಣ್ಣ ವಾಲ್ಮೀಕಿ ಸಾವಿತ್ರಿಫುಲೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್, ನಾರಾಯಣಗುರು, ಸಂಗೊಳ್ಳಿ ರಾಯಣ್ಣ, ಕನಕದಾಸರು, ಸುರಪುರ ನಾಯಕರು, ಅಕ್ಕಮಹಾದೇವಿ, ಟಿಪ್ಪುಸುಲ್ತಾನ್, ಬಾಬಾಸಾಹೇಬ್ ಅಂಬೇಡ್ಕರ್, ಸಿದ್ಧಗಂಗಾಸ್ವಾಮೀಜಿಗಳು, ಆದಿಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿಗಳಿಗೆ ಸಮಿತಿಯು ಪಠ್ಯಪರಿಷ್ಕರಣೆಯಲ್ಲಿ ಅವಮಾನಿಸಲಾಗಿದೆ. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಕಳೆದ ಐದು ವರ್ಷಗಳ ಹಿಂದೆಯೇ ವಿರೂಪಗೊಳಿಸಿ ವಿಕೃತಿ ಮೆರೆದಿದ್ದ, ನಾಡಧ್ವಜವನ್ನು ತನ್ನ ಒಳ ಉಡುಪಿಗೆ ಹೋಲಿಸಿ ಬರೆದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ಸರ್ಕಾರ ನೇಮಿಸಿದ್ದೇ ಈ ಎಲ್ಲಾ ರಾಧಾಂತಗಳಿಗೆ ಕಾರಣವಾಗಿತ್ತು.
ರೋಹಿತ್ ಚಕ್ರತೀರ್ಥನ ಸಮಿತಿಯಿಂದಾದ ದೋಷಪೂರಿತ ಪರಿಷ್ಕರಣಾ ಪಠ್ಯಗಳನ್ನು ವಾಪಸ್ ಪಡೆಯಬೇಕು. ಹಿಂದಿನ ಪಠ್ಯಗಳನ್ನೇ ಮಕ್ಕಳಿಗೆ ಒದಗಿಸಬೇಕು. ನಾಡಗೀತೆಯನ್ನು ವಿರೂಪಗೊಳಿಸಿ, ನಾಡಧ್ವಜವನ್ನು ಅವಮಾನಿಸಿದ್ದಲ್ಲದೆ ಈಗಿನ ಪರಿಷ್ಕೃತ ಪಠ್ಯಪುಸ್ತಗಳಲ್ಲಿ ಅನೇಕ ಮಹನೀಯರಿಗೆ ಅವಮಾನ ಮಾಡಿ ರಾಜ್ಯದ ಜನತೆಯ ಭಾವನೆಗೆ ಧಕ್ಕೆ ತಂದು ಸಮಾಜದಲ್ಲಿ ಶಾಂತಿಭಂಗಪಡಿಸಲು ಯತ್ನಿಸಿರುವ ಚಕ್ರತೀರ್ಥನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ವಿವಾದಿತ ವ್ಯಕ್ತಿಯನ್ನು ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿ ಆತನ ಬೆನ್ನಿಗೆ ನಿಂತು ಈ ಎಲ್ಲಾ ಕೆಟ್ಟಬೆಳವಣಿಗೆ ಅನಾಹುತ ಮತ್ತು ನಷ್ಟಗಳಿಗೆ ನೇರ ಕಾರಣವಾಗಿರುವ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ತಕ್ಷಣವೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.