- ಪಾಕಿಸ್ತಾನ್ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತಯ್ಯಬಾ ಜೊತೆ ಸಂಪರ್ಕ
- ಭಯೋತ್ಪಾದನೆಗೆ ಬಳಸುವ ರೈಫಲ್ಸ್, ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಶನಿವಾರ(ಜೂನ್ 11) ತಡರಾತ್ರಿ ಭದ್ರತಾ ಪಡೆಗಳು ಕಾರ್ಯಾಚರಣೆ ವೇಳೆ ಲಷ್ಕರ್–ಎ–ತಯಬಾ (ಎಲ್ಇಟಿ) ಉಗ್ರ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಪುಲ್ವಾಮಾ ಜಿಲ್ಲೆಯ ದ್ರಾಬ್ಗಮ್ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಪಡೆಗಳು ಸುದೀರ್ಘ ಕಾರ್ಯಾಚರಣೆ ನಡೆಸಿದ್ದು, ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿಯಿಂದಾಗಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
ಈ ಮೂವರು ಸ್ಥಳೀಯರೇ ಆಗಿದ್ದು, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತಯ್ಯಬಾ ಜೊತೆಗೆ ಸಂಪರ್ಕ ಹೊಂದಿದ್ದರು ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಖಚಿತಪಡಿಸಿದ್ದಾರೆ. ಅವರಲ್ಲಿ ಒಬ್ಬನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಫಾಜಿಲ್ ನಜೀರ್ ಭಟ್ ಮತ್ತು ಇರ್ಫಾನ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ.
ಪುಲ್ವಾಮಾದಲ್ಲಿ ಕಳೆದ ತಿಂಗಳು ಪೊಲೀಸ್ ಅಧಿಕಾರಿ ಮನೆಯಲ್ಲಿದ್ದಾಗ ಉಗ್ರರ ಗುಂಪೊಂದು ಗುಂಡು ಹಾರಿಸಿದ್ದರು. ಆಗ ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ ಅವರು ಮೃತಪಟ್ಟಿದ್ದರು. ಇನ್ನಿಬ್ಬರು ಉಗ್ರರ ಬಳಿ ಭಯೋತ್ಪಾದನೆಗೆ ಬಳಸುವ ಪ್ರಚಾರ ಸಾಹಿತ್ಯ, ಎರಡು ಎಕೆ 47 ರೈಫಲ್ಸ್, ಪಿಸ್ತೂಲ್ ಸೇರಿದಂತೆ ಸಾಕಷ್ಟು ಮದ್ದುಗುಂಡುಗಳು ಇದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಅಧಿಕಾರಿಗಳು ಹೇಳಿದ್ದಾರೆ.