ನೇತ್ರಾವತಿಯಲ್ಲಿ ನೆತ್ತರು : ಕರಾವಳಿಯ ಕೋಮುಹಿಂಸೆಯ ಪ್ರಕರಣಗಳು

“ಒಂದು ದೇಶವನ್ನು ನಾಶಗೊಳಿಸಬೇಕಾದರೆ, ಆ ದೇಶದ ಜನರು ಧರ್ಮದ ಹೆಸರಿನಲ್ಲಿ ಪರಸ್ಪರ ಹೊಡೆದಾಡುವಂತೆ ಮಾಡಬೇಕು, ಅಂತಹ ದೇಶವು ತನ್ನಿಂದ ತಾನೇ ನಾಶವಾಗುತ್ತದೆ.”

ಲಿಯೋ ಟಾಲ್‌ಸ್ಟಾಯ್

ಇದು ನಮ್ಮ ದೇಶದಲ್ಲಿ ಇಂದು ದಿನೇ ನಿಜವಾಗುತ್ತಿದೆ. ಇದನ್ನು ತಡೆಯಬೇಕಾದರೆ ಅದು ಯಾಕೆ ನಡೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಸಹಾಯ ಮಾಡುವ ಪುಸ್ತಕ ‘ನೇತ್ರಾವತಿಯಲ್ಲಿ ನೆತ್ತರು’. ‘ಕರಾವಳಿಯ ಕೋಮುಹಿಂಸೆಯ ಪ್ರಕರಣಗಳ’ ನೈಜ ಕಥನಗಳು ಇದರಲ್ಲಿವೆ. ಇದನ್ನು ಬರೆದವರು ಈ ಪ್ರಕರಣಗಳ ಪ್ರತ್ಯಕ್ಷದರ್ಶಿ ಪತ್ರಕರ್ತ ನವೀನ್ ಸೂರಿಂಜೆ. ಈ ಪ್ರಕರಣಗಳ ಭೀಕರ ವಾಸ್ತವವನ್ನು ಪ್ರಾಮಾಣಿಕವಾಗಿ ವರದಿ ಮಾಡಿದ ‘ತಪ್ಪಿಗಾಗಿ’ ಅವರು ಜೈಲಿಗೂ ಹೋಗಿ ಬಂದರು. ಸೂರಿಂಜೆ ಇಲ್ಲಿ ಬಿಚ್ಚಿಟ್ಟಿರುವ ಸುಮಾರು 40 ಕಥನಗಳು ಒಂದಕ್ಕಿಂತ ಒಂದು ಬೆಚ್ಚಿ ಬೀಳಿಸುವಂಥದು. ಈ ಪುಸ್ತಕದ ಲೇಖಕರ ಮಾತು, ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಮುನ್ನುಡಿಯ ಆಯ್ದ ಭಾಗಗಳು ಮತ್ತು ಚಿಂತಕ ಕೆ.ಫಣಿರಾಜ್ ಅವರ ಟಿಪ್ಪಣಿ ಅದರ ಮಹತ್ವದ ಮುನ್ನೋಟ ನೀಡುತ್ತದೆ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. (ಬೆಲೆ ರೂ. 185 ಪ್ರತಿಗಳಿಗೆ ಸಂಪರ್ಕಿಸಿ 99165 95916, 90360 82005, 080-2349 4488)

ನೇತ್ರಾವತಿಯಲ್ಲಿ ಆ ದಿನ ನೀರಿನ ಬದಲಾಗಿ ನೆತ್ತರು ಹರಿದಂತೆ ಕಾಣಿಸಿತು

(ಲೇಖಕರ ಮಾತಿನ ಆಯ್ದ ಭಾಗಗಳು)

ಸೌಹಾರ್ದತೆಯ ಸಮಾನತೆಯ ಭಾರತವು ಉಳಿಯಬೇಕಾದರೆ ನಾವು ನೇರವಾಗಿ ಮಾತನಾಡುವ, ಬರೆಯುವ ಧೈರ್ಯ ತೋರಬೇಕಾಗುತ್ತದೆ. ಆದ್ದರಿಂದ ಹಿಂದುತ್ವ ಎಂಬ ರಾಜಕೀಯ ಅಜೆಂಡಾ ತಂದಿಟ್ಟಿರುವ ಅಪಾಯಗಳ ಕುರಿತು ಈ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸಿದ್ದೇನೆ. ಇಲ್ಲಿ ನಾನು ಬರೆದಿರುವ ಪ್ರತಿಯೊಂದು ಘಟನೆಗಳಿಗೂ ಸಾಕ್ಷಿಯಾಗಿ ಪೊಲೀಸ್ ದಾಖಲೆಗಳು, ಮಾನವ ಹಕ್ಕು ಆಯೋಗದ ದಾಖಲೆಗಳು, ಕೋರ್ಟ್ ಅಫಿದಾವಿತ್‌ಗಳು ಇಲ್ಲವೇ ಪ್ರತ್ಯಕ್ಷದರ್ಶಿಗಳು ಇದ್ದಾರೆ. ನಾನು ನೋಡಿದ, ಆದರೆ ದಾಖಲೆಗಳಲ್ಲಿಲ್ಲದ ಇನ್ನೂ ಇಂತಹುದೇ ಹತ್ತಾರು ಕಥನಗಳು ನನ್ನ ಬಳಿ ಇದ್ದರೂ ಅದನ್ನು ಇಲ್ಲಿ ದಾಖಲಿಸಿಲ್ಲ.

ಈಗ ಮಂಗಳೂರು, ಉಡುಪಿಗಳು ದೇಶದ ಕೋಮುವಾದದ ಪ್ರಯೋಗಶಾಲೆಯಂತಾಗಿವೆ. “ರಾಮಜನ್ಮಭೂಮಿ ಹೋರಾಟವನ್ನು ಕೈಗೊಳ್ಳಬೇಕು ಮತ್ತು ಬಾಬರಿ ಮಸೀದಿಯನ್ನು ದ್ವಂಸ ಮಾಡಬೇಕು” ಎಂಬ ನಿರ್ಣಯವನ್ನು ಕೈಗೊಂಡಿದ್ದು 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ. ಅದು ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮಿ ಉಡುಪಿ ಕೃಷ್ಣಮಠದಲ್ಲಿ ಮೂರನೇ ಬಾರಿ ಪರ್ಯಾಯ ಪೀಠವೇರಿದ ವರ್ಷ. ಅಲ್ಲಿಂದ ಪ್ರಾರಂಭವಾದ, ನಂತರ ಇಡೀ ದೇಶದಲ್ಲಿ ಹರಡಿದ ಕೋಮುಗಲಭೆಗಳಿಂದಾಗಿ `ಸೌಹಾರ್ದ ಭಾರತ’ವು ಸಾವಿನಂಚಿಗೆ ಜಾರುತ್ತಲೇ ಇದೆ. ಈಗ ನಮ್ಮ ದೇಶ ಸಾವಿನಂಚಿನಲ್ಲಿದೆ. ದೇಶದಾದ್ಯಂತ ಇರುವ ಜೀವಪರ ಹೋರಾಟಗಾರರಿಂದ, ಮನುಷ್ಯತ್ವ ಉಳಿಸಿಕೊಂಡಿರುವ ಮನುಷ್ಯರಿಂದ ಈ ದೇಶ ಉಸಿರಾಡುವ ಮಟ್ಟಿಗಷ್ಟೇ ಉಳಿದುಕೊಂಡಿದೆ ಎನ್ನಬಹುದು.

ಹಾಗೆ ನೋಡಿದರೆ ಕರಾವಳಿಯಲ್ಲಿ ಈ ಮಟ್ಟಿಗಿನ ಕೋಮುವಾದ ಬೆಳೆಯಲು ಮುಖ್ಯ ಕಾರಣ ಆಗಿನ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರು. ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರಿಂದಾಗಿಯೇ ಭೂಸುಧಾರಣಾ ಕಾಯ್ದೆಯು ಕರಾವಳಿಯಲ್ಲಿ ಯಶಸ್ವಿಯಾಗಿ ಕಾರ್ಯಗತವಾಯಿತು. ಇದರಿಂದಾಗಿಯೇ ಕರಾವಳಿಯ ಶೂದ್ರ ಹಿಂದುಳಿದ ಸಮುದಾಯಗಳಿಗೆ ಭೂಮಿ ಸಿಕ್ಕಿತು. ಒಕ್ಕಲಿನ ಆಳು ಮತ್ತು ಒಕ್ಕೆಲ್ಲಾಯ (ಒಕ್ಕಲಿನ ಉಲ್ಲಾಯ : ಕೃಷಿ ಭೂಮಿಯ ಧಣಿ) ಎಂಬ ಸಾಮಾಜಿಕ ಪರಿಸ್ಥಿತಿಗಳು ಬದಲಾದವು.

ಧಣಿ ಒಕ್ಕಲಿನಲ್ಲಿದ್ದ ಹಿಂದುಳಿದ ಶೂದ್ರ ಸಮುದಾಯಗಳು ಕೃಷಿ ಭೂಮಿಯನ್ನು ಹೊಂದುವುದರ ಜೊತೆಗೆ ವಿದ್ಯಾಭ್ಯಾಸದತ್ತವೂ ಹೊರಳಿದವು. ಇದು ಮೇಲುಜಾತಿಗಳ ಪ್ರತಿಷ್ಠೆಗೆ ಪೆಟ್ಟು ಕೊಟ್ಟಿತು. ಕರಾವಳಿಯಲ್ಲಿ ಹಳೆಯ ಯಜಮಾನಿಕೆಯನ್ನು ಹಳೇ ಮಾದರಿಯಲ್ಲೇ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಮೇಲುಜಾತಿಯ ಉಳ್ಳವರಿಗೆ ಆಗಷ್ಟೇ ಕಾಲಿಟ್ಟ ಹಿಂದುತ್ವ ಕಾನ್ಸೆಪ್ಟ್ ನೆರವಾಯ್ತು.

ಅಲ್ಲಿಂದೀಚೆಗೆ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಕಾರಣವೇ ಇಲ್ಲದೇ ಮುಸ್ಲಿಮರ ಮೇಲೆ ಹಲ್ಲೆಗಳಾದವು. ತನಗೆ ಸಂಬಂಧವೇ ಇಲ್ಲದ, ತನ್ನ ಕುಟುಂಬ ಸದಸ್ಯರೂ ಅಲ್ಲದ, ಯಾವುದೇ ಕುಟುಂಬದಿಂದ ದೂರುಗಳು ಇಲ್ಲದೇ ಇದ್ದರೂ ಹಿಂದೂ ಮುಸ್ಲಿಂ ಯುವಕ ಯುವತಿಯರು ಪ್ರೀತಿಸುವುದನ್ನು ವಿರೋಧಿಸಿ ಕೋಮುಗಲಭೆಗಳು, ಹಲ್ಲೆಗಳು ನಡೆಯಿತು. ಶೂದ್ರ ಯುವಕರ ಮನಸ್ಸನ್ನು ಮಲಿನಗೊಳಿಸಿ ಅವರನ್ನು “ಧರ್ಮ ಮತ್ತು ಹಿಂದುತ್ವ ಉಳಿಸುವ ದಾರಿ ಇದು ಮಾತ್ರವೇ, ಮತ್ತು ಇದು ಗರ್ವದ ಕೆಲಸ” ಎಂದು ಹುರಿದುಂಬಿಸಿ ಈ ರೀತಿ ಹಲ್ಲೆಗಳನ್ನು ಮಾಡಿ ಜೈಲಿಗೆ ಹೋಗಲು ಸಿದ್ಧವಾಗುವಂತೆ ಚಿತಾವಣೆ ನಡೆಸಲಾಯಿತು. ಮೇಲ್ವರ್ಗಗಳು ಕಾರ್ಯಕ್ರಮಗಳಲ್ಲಿ ಬಿಳಿ ಲುಂಗಿ, ಬಿಳಿ ಶಾಲಿನಲ್ಲಿ ಮಿಂಚಿದರೆ ಹಿಂದುಳಿದ ವರ್ಗಗಳು ಕೇಸರಿ ಶಾಲು ಹಾಕಿಕೊಂಡು ಸ್ವಯಂಸೇವಕರಾದರು. ಹಿಂದುತ್ವ ರಾಜಕಾರಣದ ಮೂಲಕ ಅಂತೂ ಇಂತೂ ಮತ್ತೆ ಹಿಂದೂ ಧರ್ಮದ ಹೆಸರಿನಲ್ಲಿ ಹಳೆಯ ಯಜಮಾನಿಕೆಯನ್ನು ಸ್ಥಾಪಿಸುವಲ್ಲಿ ಮೇಲ್ವರ್ಗಗಳು ಯಶಸ್ವಿಯಾದವು.

ದೊಡ್ಡ ಮಟ್ಟದ ಸಾವು ನೋವಿನ ಕೋಮುಗಲಭೆಗಳು ಆಗಾಗ ನಡೆಯುತ್ತಿದ್ದರೆ, ಹುಡುಗ ಹುಡುಗಿಯ ಮೇಲಿನ ನೈತಿಕ ಪೊಲೀಸುಗಿರಿ ದಾಳಿಗಳು, ದನ ಸಾಗಾಟಗಾರರ ಮೇಲಿನ ಹಲ್ಲೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಅಕ್ರಮ ದನಸಾಗಾಟಗಾರರ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇದೆ, ಆದರೆ ಅವರು ಅದರ ವಿಚಾರಣೆ ಸಿವಿಲ್ ಸ್ವರೂಪದಲ್ಲಿ ನಡೆಸಬೇಕು. ದನ ಸಾಗಾಟಗಾರರ ಮೇಲೆ ಹೂಡಲಾದ ಮೊಕದ್ದಮೆಯನ್ನು ಪೊಲೀಸರು ದನಮಾರಾಟಗಾರರಾದ ಹಿಂದೂ ಕೃಷಿಕರ ಮೇಲೆ ಹಾಕುವುದಿಲ್ಲ! ಖರೀದಿ-ಮಾರಾಟ, ದನದ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳ ಪ್ರಮಾಣಪತ್ರ, ಸಂಚಾರ ನಿಯಮ ಉಲ್ಲಂಘನೆ, ಜಾನುವಾರು ಕಾಯ್ದೆಗಳ ಉಲ್ಲಂಘನೆಯ ಬಗೆಗಿನ ಕಾಗದಪತ್ರಗಳನ್ನು ಪರಿಶೀಲನೆ ಮಾಡಿ ತನಿಖೆ ಮಾಡಬೇಕಾದ ಪೊಲೀಸರು, ದನಸಾಗಾಟಗಾರರ ವಿಷಯವಾಗಿ ವಿಚಾರಣೆಯನ್ನೇ ನಡೆಸದೇ ಬೀದಿಯಲ್ಲೇ ಶಿಕ್ಷೆ ಘೋಷಿಸಿಬಿಡುತ್ತಾರೆ. ಪೊಲೀಸ್ ಮತ್ತು ಭಜರಂಗದಳ ಜಂಟಿ ಕಾರ್ಯಾಚರಣೆಯಿಂದ ಬೀದಿಯಲ್ಲೇ ಹೆಣವಾದ ಅಮಾಯಕ ದನಸಾಗಾಟಗಾರರೆಷ್ಟೋ? ಬೀದಿಯಲ್ಲೇ ಬಿದ್ದ ಹೊಡೆತದಿಂದ ಕೈಕಾಲು ಕಳೆದುಕೊಂಡು, ಕಿಡ್ನಿ ಡ್ಯಾಮೇಜ್ ಆಗಿ ಜೀವಚ್ಚವವಾದ ಜೀವಗಳೆಷ್ಟೋ?

2009ರ ಘಟನೆ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಉಪ್ಪಿನಂಗಡಿಯ ಕೃಷಿಕರ ಮನೆಯಿಂದ ಗೊಡ್ಡು ದನಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಜಂಟಿಯಾಗಿ ನೇತ್ರಾವತಿ ಸೇತುವೆಯಲ್ಲಿ ವಾಹನವನ್ನು ತಡೆಯುತ್ತಾರೆ. ಪೊಲೀಸರು ಮಾತ್ರ ತಡೆದಿದ್ದರೆ ಚಾಲಕ ಇಳಿದು ದಾಖಲೆ ನೀಡಿ ಮುಂದುವರೆಯುತ್ತಿದ್ದನೋ ಏನೋ? ಪೊಲೀಸರ ಜತೆ ಕೇಸರಿ ಶಾಲುಧಾರಿ ಕಾರ್ಯಕರ್ತರೂ ಇದ್ದಿದ್ದರಿಂದ, ಅವರ ಆಟಾಟೋಪಗಳು, ಹಿಂಸೆಗಳ ಅರಿವಿದ್ದರಿಂದ ದನ ಸಾಗಾಟ ವಾಹನದಲ್ಲಿದ್ದ ಮೊಹಮ್ಮದ್ ಮುಸ್ತಾಫಾ ಮತ್ತು ಆಸೀಫ್ ಗಾಡಿ ನಿಲ್ಲಿಸಿ ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ, ಪೊಲೀಸರು ಹೆಚ್ಚೆಂದರೆ ವಾಹನ ಸೀಝ್ ಮಾಡಿ ಕೇಸು ಹಾಕಲು ಮಾತ್ರವೇ ಬದ್ಧರು. ಆದರೆ ಈ ಪ್ರಕರಣದಲ್ಲಿ ಪೊಲೀಸರು ಮತ್ತು ಹಿಂದುತ್ವ ಕಾರ್ಯಕರ್ತರು ಓಡುತ್ತಿದ್ದ ಮುಸ್ತಾಫ ಮತ್ತು ಆಸೀಫರನ್ನು ಭಯೋತ್ಪಾದಕರನ್ನೋ ಅಥವಾ ಡಕಾಯಿತರನ್ನೋ ಬೆನ್ನಟ್ಟುವಂತೆ ಬೆನ್ನಟ್ಟುತ್ತಾರೆ. ನೇತ್ರಾವತಿ ಸೇತುವೆ ಮೇಲೆ ಓಡಿ ಓಡಿ ಸುಸ್ತಾದ ಮೊಹಮ್ಮದ್ ಮುಸ್ತಾಫಾ ಮತ್ತು ಆಸೀಫ್ ಇಬ್ಬರೂ `ಈ ಪೊಲೀಸರು ಆಥವಾ ಹಿಂದುತ್ವ ಕಾರ್ಯಕರ್ತರ ಕೈಗೆ ಸಿಕ್ಕು ಯಮಹಿಂಸೆ ಅನುಭವಿಸಿ ಸಾಯುವುದಕ್ಕಿಂತ ಬದುಕಿದರೆ ಬದುಕಿಯೇನು ಇಲ್ಲವಾದರೆ ಸಾವು ಇದ್ದಿದ್ದೇ!’ ಎಂದುಕೊಂಡು ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿಯುತ್ತಾರೆ. ಬದುಕದಿದ್ದರೂ ಪರವಾಗಿಲ್ಲ ಇವರ ಕೈಗೆ ಸಿಗಬಾರದು ಎಂಬ ಮನಸ್ಥಿತಿಗೆ ಆ ಇಬ್ಬರು ಯುವಕರನ್ನು ತಂದಿದ್ದ ಪೊಲೀಸರು ಮತ್ತು ಭಜರಂಗಿಗಳು ಹರಡಿಸಿದ ಭಯೋತ್ಪಾದನೆ ಎಂತಹದ್ದಿರಬಹುದು?

ಜೀವಭಯದಿಂದ ನದಿಗೆ ಹಾರಿದ್ದ ಮೊಹಮ್ಮದ್ ಮುಸ್ತಾಫಾ ಮತ್ತು ಆಸೀಫ್ ಬಗ್ಗೆ ಪೊಲೀಸರಿಗೆ ಮತ್ತು ಭಜರಂಗಿಗಳಿಗೆ ಕನಿಷ್ಠ ಲೊಚಗುಡುವಷ್ಟೂ ಅನುಕಂಪ ಮೂಡಲಿಲ್ಲ. “ಪರಾರಿಯಾಗಲು ನದಿಗೆ ಧುಮುಕಿರುವವರ ಪತ್ತೆಗೆ ಕ್ರಮ ವಹಿಸಲಾಗುತ್ತಿದೆ” ಎಂಬರ್ಥದಲ್ಲಿ ಪೊಲೀಸ್ ಹೇಳಿಕೆಗಳನ್ನು ನೀಡಿ ಮುಸ್ತಾಫ ಮತ್ತು ಆಸೀಫ್ ಪತ್ತೆ ಕಾರ್ಯ ಮುಂದುವರೆಸಲಾಯಿತು. ದನ ಸಾಗಾಟವನ್ನು ಹಿಡಿಯುವುದು ಎಂದರೆ ದನದ ರಕ್ಷಣಾ ಕಾರ್ಯಾಚರಣೆ!. ಜೀವ ಭಯದಿಂದ ನೀರಿಗೆ ದುಮುಕಿದ ವ್ಯಕ್ತಿಗಳ ವಿಷಯವಾಗಿ ಮಾತ್ರ ರಕ್ಷಣಾ ಕಾರ್ಯಾಚರಣೆಯ ಬದಲು `ಪತ್ತೆ ಹಚ್ಚಿ ಹಿಡಿಯುವ ಕಾರ್ಯಾಚರಣೆ’…! ಕನಿಷ್ಠ ಬಾಯಿಮಾತಿಗಾದರೂ, `ರಕ್ಷಣಾ ಕಾರ್ಯಾಚರಣೆ’ ಎಂದು ಹೇಳಲೂ ಆಗದಷ್ಟು ದ್ವೇಷ ತುಂಬಿ ಹೋಗಿತ್ತು ಈ ಪೊಲೀಸರ, ಭಜರಂಗಿಗಳ ಮನಸ್ಸಿನಲ್ಲಿ.

ನೇತ್ರಾವತಿಯಲ್ಲಿ ಆ ದಿನ ನೀರಿನ ಬದಲಾಗಿ ನೆತ್ತರು ಹರಿದಂತೆ ಕಾಣಿಸಿತು.

`ಕೇಸರಿ ಶಾಲು’, `ನೈತಿಕ ಪೊಲೀಸುಗಿರಿ’, `ಧರ್ಮ ರಕ್ಷಣೆ’, `ಭಾರತೀಯ ಸಂಸ್ಕೃತಿ ರಕ್ಷಣೆ’ ಇವೆಲ್ಲದರ ಹಿಂದೆ ಬೇರೆಯದ್ದೇ ರಾಜಕೀಯ ಅಜೆಂಡಾ ಇದೆ ಎಂಬುದು ಹಿಂದುಳಿದ ವರ್ಗಗಳಿಗೆ ಗೊತ್ತಾಗಬೇಕಿದೆ. ಎಲ್ಲಾ ಸಂದರ್ಭದಲ್ಲೂ ಹಿಂದುತ್ವದ `ರಾಜಕೀಯ ಅಜೆಂಡಾ’ ಬಯಲಾಗುತ್ತಿದ್ದರೂ ಮರೆವಿನ ಕಾರಣದಿಂದ ಜನರು ಮತ್ತೆ ಮತ್ತೆ ತಮಗೆ ಸಂವಿಧಾನ ದತ್ತ ಸವಲತ್ತುಗಳನ್ನು ತೆಗೆದು ಹಾಕಲು ಚಿತಾವಣೆ ನಡೆಸುತ್ತಿರುವವರಿಂದ ಈ ಕೋಮುವಾದಿ ದಾಳಕ್ಕೆ ಸಿಲುಕಿಕೊಳ್ಳುತ್ತಾರೆ.

ಪ್ರಾರಂಭದಲ್ಲಿ ಮೇಲು-ಕೀಳು ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು, ಕೆಳವರ್ಗಗಳು ಅಭಿವೃದ್ಧಿ ಹೊಂದದಂತೆ ನೋಡಿಕೊಳ್ಳಲು, ಬ್ರಾಹ್ಮಣ್ಯದ ರಕ್ಷಣೆಗಾಗಿ ಊಳಿಗಮಾನ್ಯ ಯಜಮಾನಿಕ ವ್ಯವಸ್ಥೆಯು ಹಿಂದುತ್ವದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈಗ ಕಾರ್ಪೋರೇಟ್ ಮತ್ತು ಹಿಂದುತ್ವದ ನಡುವೆ ಮೈತ್ರಿಯಾಗಿ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡೇ ಹಿಂದುಳಿದ ವರ್ಗಗಳನ್ನು ತುಳಿಯುತ್ತಲೇ ಮೇಲ್ವರ್ಗದ ಯಜಮಾನಿಕೆ ಮತ್ತು ಕಾರ್ಪೋರೇಟ್ ವ್ಯವಸ್ಥೆಯ ಪರ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಹಿಂದುತ್ವ ರಾಜಕಾರಣದ ಸುಳ್ಳುಗಳು, ಅಪ್ರಾಮಾಣಿಕತೆ ಮತ್ತು ಹಿಡನ್ ಅಜೆಂಡಾ, ಸರ್ಕಾರಿ ಭಾಗಿದಾರಿಕೆಯನ್ನು ಘಟನೆಗಳ ಸಹಿತ “ನೇತ್ರಾವತಿಯಲ್ಲಿ ನೆತ್ತರು” ಪುಸ್ತಕದಲ್ಲಿ ಕ್ರೋಢೀಕರಿಸಲಾಗಿದೆ.

ನವೀನ್ ಸೂರಿಂಜೆ

ನೈತಿಕ ಪೊಲೀಸುಗಿರಿಯ ದೌರ್ಜನ್ಯ, ಕ್ರೂರ ಪೊಲೀಸರ ಪಕ್ಷಪಾತತನ ಬಿಚ್ಚಿಟ್ಟಿದ್ದಾರೆ

ಇತ್ತೀಚೆಗೆ ಏಕ ಸಂಸ್ಕೃತಿಯ ಪ್ರತಿಪಾದಕರು ಹೆಚ್ಚುತ್ತಿದ್ದು, ದೇಶದೊಳಗೆ `ನಾಗರಿಕ ಭಯೋತ್ಪಾದನೆ’ಯನ್ನು ಮಾಡುತ್ತಿದ್ದಾರೆ. ಈ ರೀತಿಯ ಆಂತರಿಕ ಭಯೋತ್ಪಾದನೆಯು ದೇಶದ ಗಡಿರಕ್ಷಣಾ ಸಮಸ್ಯೆಗಿಂತಲೂ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದು, ದೇಶವನ್ನು ಆಂತರಿಕವಾಗಿ ವಿಭಜನೆಗೆ ಪ್ರೇರೇಪಿಸುತ್ತದೆ. ದೇಶಪ್ರೇಮಿ ಭಾರತೀಯರು ಈಗಲೇ ಎಚ್ಚೆತ್ತುಕೊಂಡು ಇದನ್ನು ಪ್ರತಿಭಟಿಸದೇ ಇದ್ದರೆ ದೇಶವಿಭಜನೆಯೋ, ವಿನಾಶವೋ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಒಂದೆಡೆಯಲ್ಲಿ ದಲಿತ, ಹಿಂದುಳಿದ ಯುವಕರನ್ನು ಬಳಸಿಕೊಂಡ ಮೇಲ್ವರ್ಗದ ಮತಾಂಧರು, ಮತ್ತೊಂದೆಡೆ ಮತಾಂಧರಾಗಿರುವ ಪೊಲೀಸರು. ಕೇಸರಿ ಮತ್ತು ಕೆಲ ಖಾಕಿ ಮತಾಂಧರು ಜಂಟಿಯಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದ್ದಾರೆ. `ನೇತ್ರಾವತಿಯಲ್ಲಿ ನೆತ್ತರು’ ಎಂಬ ಈ ಪುಸ್ತಕದಲ್ಲಿ ಕೋಮುಗಲಭೆಗಳ ಆಳ-ಅಗಲ, ನೈತಿಕ ಪೊಲೀಸುಗಿರಿಯ ದೌರ್ಜನ್ಯ, ಕ್ರೂರ ಪೊಲೀಸರ ಪಕ್ಷಪಾತತನ ಮತ್ತು ಕೋಮುಗಲಭೆಗಳಲ್ಲಿ ಭಾಗಿದಾರಿತನವನ್ನು ಒಂದೊಂದು ಲೇಖನದಲ್ಲಿ ನವೀನ್ ಸೂರಿಂಜೆಯವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಂವಿಧಾನಬದ್ಧ ಸ್ವಸ್ಥ ಸಮಾಜದ ಆಶಯ ಹೊಂದಿರುವ ನಾಗರಿಕರು, ಸರ್ಕಾರಿ ಅಧಿಕಾರಿಗಳು ಓದಲೇಬೇಕಾದ ಪುಸ್ತಕವಿದು.

ಬಿ.ಕೆ.ಶಿವರಾಂ, ನಿವೃತ್ತ ಎಸಿಪಿ

ಹಿಂದುತ್ವ ಮತೀಯವಾದ ಕಾರ್ಯಾಚರಣೆಯ ವಿಧಾನಗಳ ಬಗ್ಗೆ ಬೆಳಕು ಚೆಲ್ಲುತ್ತದೆ

ಹಿಂದುತ್ವವಾದಿ ಫ್ಯಾಸಿಸ್ಟ್ ರಾಜಕೀಯವನ್ನು ವಿರೋಧಿಸಲು, ನಾವು ನಮ್ಮ ಬದುಕಿನ ವಿವೇಕ ವಿವೇಚನೆಗಳನ್ನು ಎಚ್ಚರದಲ್ಲಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಫ್ಯಾಸಿಸ್ಟ್ ಹಿಂಸಾ ಕೃತ್ಯಗಳ ಸ್ವರೂಪವನ್ನು ಅರಿಸುವ ವಾಸ್ತವಿಕ ವಿದ್ಯಮಾನಗಳ ನಿರೂಪಣೆಗಳೂ ಅಗತ್ಯ.

ಯುವ ಮಾಧ್ಯಮ ವರದಿಗಾರರಾಗಿ ಕರಾವಳಿಯಲ್ಲಿ ಧೀರ್ಘ ಕಾಲ ಚುರುಕಿನ ತನಿಖಾ ವರದಿಗಳನ್ನು ಪ್ರಕಟಿಸಿದ ನವೀನ್ ಸೂರಿಂಜೆಯವರು ತಮ್ಮ ವೃತ್ತಿ ಅನುಭವವನ್ನು ಕಡೆದು ಕಟ್ಟಿರುವ ಬರಹಗಳ ಸಂಕಲನವಿದು. ಸರಳವೂ ತೀಕ್ಷ್ಣವೂ ಆದ ಈ ಬರಹಗಳನ್ನು ಅಗತ್ಯವಾಗಿ (ಹಿಂದುತ್ವ ರಾಜಕೀಯಕ್ಕೆ ಮನಸ್ಸು ಕೊಟ್ಟವರೂ ಸೇರಿದಂತೆ) ಎಲ್ಲಾ ನಾಗರಿಕರೂ ಓದಬೇಕು.

ಹಿಂದುತ್ವ ಮತೀಯವಾದ ಕಾರ್ಯಾಚರಣೆಯ ವಿಧಾನಗಳ ಬಗ್ಗೆ ಬೆಳಕು ಚೆಲ್ಲುವುದು ಮಾತ್ರವಲ್ಲದೆ, ಬಡತನದ ಬವಣೆಗಳನ್ನೂ, (ಆರೋಪಕ್ಕೆ ತುತ್ತಾಗಿ ಸ್ವತಃ ಜೈಲುವಾಸ ಅನುಭವಿಸಿರುವವರಾಗಿ) ಮಂಗಳೂರು ಜೈಲೊಳಗಿನ ಮಾನವ ಗತಿಯ ಕಥನಗಳನ್ನು ಬಹಳ ಅಂತಃಕರಣದಲ್ಲಿ ನವೀನ್ ನಿರೂಪಿಸಿರುವರು.

ಕೆ.ಫಣಿರಾಜ್

Donate Janashakthi Media

Leave a Reply

Your email address will not be published. Required fields are marked *