ಮಾಜಿ ಬಿಜೆಪಿ ವಕ್ತಾರರುಗಳ ತಪ್ಪಿನ ಗಹನತೆಯನ್ನು ತಗ್ಗಿಸದೆ ದೃಢ ಕ್ರಮ ಕೈಗೊಳ್ಳಬೇಕು–ದಿಲ್ಲಿ ಪೊಲೀಸ್ಗೆ ಆಗ್ರಹ
ನವದೆಹಲಿ: ಪ್ರವಾದಿ ಮುಹಮ್ಮದ್ ವಿರುದ್ಧ ಇಬ್ಬರು ಬಿಜೆಪಿ ವಕ್ತಾರರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಪ್ರತಿಭಟನೆಗಳ ಸಂದರ್ಭದಲ್ಲಿ ರಾಂಚಿ, ಹೌರಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಇದು ಅತ್ಯಂತ ಕಳವಳ ಉಂಟು ಮಾಡುವ ಸಂಗತಿ. ಇಂತಹ ಪ್ರಚೋದನಕಾರಿ ಮತ್ತು ಅವಮಾನಕರ ಟೀಕೆಗಳ ವಿರುದ್ಧದ ಕೋಪವು ಸಮರ್ಥನೀಯವಾಗಿದ್ದರೂ, ಯಾವುದೇ ಹಿಂಸಾತ್ಮಕ ಪ್ರತಿಭಟನೆಯನ್ನು ಕೋಮು ಶಕ್ತಿಗಳು ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುತ್ತವೆ ಮತ್ತು ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಆದ್ದರಿಂದ ಸಮಾಧಾನದಿಂದಿರಬೇಕು ಮತ್ತು ಶಾಂತಿ ಕಾಪಾಡಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಜನತೆಗೆ ಮನವಿ ಮಾಡಿದೆ.
ದುರದೃಷ್ಟವಶಾತ್, ದೆಹಲಿ ಪೊಲೀಸರು ಈ ಇಬ್ಬರು ಮಾಜಿ ವಕ್ತಾರರನ್ನು ಮಾತ್ರವಲ್ಲದೆ ಈ ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಒಬ್ಬ ಪತ್ರಕರ್ತರು ಸೇರಿದಂತೆ ಇತರ 30 ಮಂದಿಯನ್ನೂ ಹೆಸರಿಸಿ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಇದು ಆ ಇಬ್ಬರು ಮಾಜಿ ವಕ್ತಾರರು ಎಸಗಿದ ತಪ್ಪಿನ ಗಹನತೆಯನ್ನು ತಗ್ಗಿಸುವುದಕ್ಕಾಗಿ ಮಾಡಿರುವ ಒಂದು ದಿಕ್ಕು ತಪ್ಪಿಸುವ ನಡೆಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಆ ಇಬ್ಬರು ಮಾಜಿ ವಕ್ತಾರರ ವಿರುದ್ಧ ಕಾನೂನಿನ ಅಡಿಯಲ್ಲಿ ನಿರ್ದಿಷ್ಟ ಅಪರಾಧಕ್ಕಾಗಿ ಪ್ರತ್ಯೇಕವಾಗಿ ಕಾನೂನಿನಡಿಯಲ್ಲಿ ದೃಢ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.