ಮಂಗಳೂರು:ಅವೈಜ್ಞಾನಿಕ ವೃತ್ತ ನಿರ್ಮಾಣ ಮಾಡಿ ಕೃತಕ ಟ್ರಾಫಿಕ್ ಜಾಮ್ ಸಮಸ್ಯೆ ತಂದೊಡ್ಡಿರುವ ಸಂಚಾರಿ ಪೋಲೀಸ್ ಕ್ರಮವನ್ನು ವಿರೋಧಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಾದ್ಯಂತ ಅವ್ಯವಸ್ಥೆ ಸೃಷ್ಟಿಸಿರುವ ಮ.ನ.ಪಾ ಆಡಳಿತದ ವಿರುದ್ಧ ಇಂದು (ಜೂನ್ 9) ನಗರದ ಹ್ಯಾಮಿಲ್ಟನ್ ಸರ್ಕಲ್ ನಲ್ಲಿ ಡಿವೈಎಫ್ಐ, ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಪ್ರಾಸ್ತಾವಿಕವಾಗಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ, ಕೆನಡದ ಹ್ಯಾಮಿಲ್ಟನ್ ಮೇಯರ್ ಮಂಗಳೂರಿಗೆ ಭೇಟಿ ನೀಡಿದ ನೆನಪಿಗಾಗಿ ಹ್ಯಾಮಿಲ್ಟನ್ ಹೆಸರಿಡಲಾಗಿದ್ದ ವೃತ್ತವನ್ನು ಕೂಡಾ ನೆಲಸಮಗೊಳಿಸಿದ್ದಾರೆ. ಇವತ್ತು ಜನ ಮಂಗಳೂರು ನಗರಕ್ಕೆ ಪ್ರವೇಶಿಸುವುದೆಂದರೆ ಚಕ್ರವ್ಯೂಹಕ್ಕೆ ಸಿಲುಕಿದಂತಾಗಿದೆ.ನಗರದ ಯಾವ ರಸ್ತೆಯಲ್ಲಿ ಸಂಚರಿಸಿದರು ದಿಗ್ಬಂಧನ ವಿಧಿಸಿದಂತೆ ರಸ್ತೆಗಳೆಲ್ಲವೂ ಸಂಪೂರ್ಣ ಮುಚ್ಚಲಾಗಿದೆ. ಇಂತಹ ಅವ್ಯವಸ್ಥೆ ಸ್ಥಳಗಳಿಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್, ಮ.ನ.ಪಾ ಬಿಜೆಪಿ ಆಡಳಿತ ಹಾಗೂ ಜಿಲ್ಲಾಡಳಿತವೇ ನೇರ ಹೊಣೆ .ಈ ರೀತಿಯ ಅಳವಡಿಸಿದ ಕಲ್ಲುಗಳನ್ನು ತೆರವುಗೊಳಿಸಲು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ಧೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡುವಾಗ ಜನರಲ್ಲಿ ನಿರೀಕ್ಷೆಗಳಿದ್ದವು. ಮಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ , ಡ್ರೈನೇಜ್ ಸಮಸ್ಯೆಗಳಿಗೆ ಸ್ಮಾರ್ಟ್ ಸಿಟಿ ಯೋಜನೆಯಿಂದ ಅಂತ್ಯ ದೊರೆಯಬಹುದು ಎಂದುಕೊಂಡಿದ್ದ ಜನತೆಯ ನಿರೀಕ್ಷೆಗಳು ಹುಸಿಗೊಂಡಿವೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದ ಇಲ್ಲದ ಸಮಸ್ಯೆಗಳು ನಗರದಲ್ಲಿ ಹುಟ್ಟಿಕೊಳ್ಳುತ್ತಿದೆ. ಇಲ್ಲಿನ ಶಾಸಕರಾದ ವೇದವ್ಯಾಸ ಕಾಮತರ ಕಮಿಷನ್ ಆಸೆಗೆ ಮಂಗಳೂರು ನಗರವು ಬಲಿಯಾಗುತ್ತಿದೆ ಎಂದರು. ಮೀನುಗಾರಿಕಾ ಮತ್ತು ಸಾಗರೋತ್ತರ ವಾಣೆಜ್ಯ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರು ನಗರದ 8 ವಾರ್ಡ್ ಗಳ ಅಭಿವೃದ್ಧಿಗೆ ಅನುದಾನಗಳು ಮಂಜೂರಾಗಿದ್ದು ಈ ಅನುದಾನವು ವ್ಯವಸ್ಥಿತವಾಗಿ ಬಳಕೆಯಾಗುತ್ತಿಲ್ಲ . ಬದಲಾಗಿ ಬಂದರನ್ನು ಪ್ರವೇಶಿಸುವ ರಸ್ತೆಗಳನ್ನು ವೃತ್ತ ನಿರ್ಮಾಣದ ಹೆಸರಿನಲ್ಲಿಕಿರಿದುಗೊಳಿಸಲಾಗುತ್ತಿದೆ. ಇದರಿಂದ ಬಂದರುಗಳಿಗೆ ತೆರಳುವ ಗೂಡ್ಸ್ ಲಾರಿಗಳಿಗೂ ಸಮಸ್ಯೆಗಳಾಗುತ್ತಿದೆ ಎಂದು ಬಿ.ಕೆ. ಇಮ್ತಿಯಾಜ್ ತಿಳಿಸಿದರು.
ಸಿಪಿಐಎಮ್ ದ.ಕ. ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ಮಂಗಳೂರಿನ ಅವೈಜ್ಞಾನಿಕ ವೃತ್ತ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆಗಳು ತಲೆದೋರುತ್ತಿದೆ. ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕೆಡವಿ ಹಾಕಲಾಗುತ್ತಿದೆ. ಈಗಾಗಲೇ ನಿರ್ಮಾಣ ಮಾಡಿ ವರುಷಗಳೇ ಆಗಿರದ ಡಿವೈಡರ್ ಗಳನ್ನು, ವೃತ್ತಗಳನ್ನು ಅಗೆದು ನಗರವನ್ನು ವಿಕೃತಗೊಳಿಸಲಾಗುತ್ತಿದ್ದಾರೆ ಎಂದು ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ , ಡಿವೈಎಫ್ಐ ಜಿಲ್ಲಾ ಮುಖಂಡ ಮನೋಜ್ ವಾಮಂಜೂರು ಮಾತನಾಡಿದರು.ಪ್ರತಿಭಟನೆಯಲ್ಲಿ ನವೀನ್ ಕೊಂಚಾಡಿ, ರಫೀಕ್ ಹರೇಕಳ, ಆಶಾ ಬೋಳೂರು, ಮಾಧುರಿ ಬೋಳಾರ್, ಸಾಮಾಜಿಕ ಕಾರ್ಯಕರ್ತರಾದ ಜೇರಾಲ್ಡ್ ಟವರ್, ಮಹಿಳಾ ಮುಖಂಡರಾದ ಪ್ರಮಿಳಾ ದೇವಾಡಿಗ, ಭಾರತೀ ಬೋಳಾರ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮುಸ್ತಾಫ ಕಲ್ಲಕಟ್ಟೆ, ನೌಶದ್ , ಹಮಾಲಿ ಸಂಘದ ಮುಖಂಡರಾದ ವಿಲ್ಲಿ ವಿಲ್ಸನ್, ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಮುಖಂಡರಾದ ಪ್ರಥಮ್ ಬಜಾಲ್, ರೇವಂತ್ ಮುಂತಾದವರು ಉಪಸ್ಥಿತರಿದ್ದರು.