ಧಾರವಾಡ: ರಾಜ್ಯಸಭೆ ಚುನಾವಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದ್ದು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವಿನ ವಾಕ್ಸಮರ ತಾರಕ್ಕೇರಿದೆ. ಇತ್ತ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ʻಕಾಂಗ್ರೆಸ್ ಜೊತೆ ಜೆಡಿಎಸ್ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಿದ್ದರೆ, ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲಿ ಎಂದು ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಂಧಾನ ಮಾಡಿಕೊಳ್ಳುವಂತೆ ಹೆಚ್ ಡಿ ಕುಮಾರಸ್ವಾಮಿ ಆಹ್ವಾನ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವುದೇ ಈಗ ಸಂಧಾನ. ಅವರು ನಮಗೆ ಮತ ಹಾಕಬೇಕು ಅದೇ ಸಂಧಾನ. ಈ ಹಿಂದೆ ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ, ಅವರು ಈಗ ಯಾಕೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ಗುರಿಯಾಗಿದ್ದರೆ, ಜೆಡಿಎಸ್‍ನವರು ನಮಗೆ ಬೆಂಬಲಕೊಡಲಿ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ, ಅವರ ಪಕ್ಷಕ್ಕೆ ಇಲ್ಲ ಎಂದರು.
ನಮ್ಮ ಹೈಕಮಾಂಡ್ ಇರುವುದು ದೆಹಲಿಯಲ್ಲಿ, ಅವರದ್ದು ಪದ್ಮನಾಭನಗರದಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ, ಈಗೇನಿದ್ದರೂ ಮತದಾನದ ದಿನವೇ ತೀರ್ಮಾನ ಆಗುತ್ತದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಹಿತಿಗಳು ಅವರ ಫಲಾನುಭವಿಗಳಾಗಿದ್ದರು ಎಂಬ ಅಡ್ಡಂಡ ಕಾರಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ಅವರು, ಪಂಡಿತಾರಾಧ್ಯ ಶ್ರೀ ನಮ್ಮ ಫಲಾನುಭವಿನಾ ಎಂದು ಪ್ರಶ್ನಿಸಿದರು. ಪಠ್ಯಕ್ರಮದಲ್ಲಿ ಬಸವಣ್ಣನ ವಿಚಾರವನ್ನು ತಿರುಚಲಾಗಿದೆ. ಅಂಬೇಡ್ಕರ್ ಸೇರಿದಂತೆ ಭಗತ್ ಸಿಂಗ್ ಹಾಗೂ ಕುವೆಂಪು ಅವರ ವಿಚಾರವನ್ನೂ ತಿರುಚಲಾಗಿದೆ. ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು, ಅದನ್ನು ಬಿಟ್ಟು ಚರಿತ್ರೆಯ ನಿಜಾಂಶವನ್ನು ಮುಚ್ಚಿಟ್ಟು ತಿರುಚಲಾಗಿದೆ ಎಂದು ಕಿಡಿಕಾರಿದರು.
ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನೇ ತೆಗೆದುಹಾಕಲಾಗಿದೆ. ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದ್ದರು. ಅದನ್ನೂ ತಿರುಚಲಾಗಿದೆ. 10 ದಿನದಲ್ಲಿ ಪಠ್ಯಪರಿಷ್ಕರಣೆ ಆಗಬೇಕು ಎಂಬುದಕ್ಕೆ ನನ್ನ ಬೆಂಬಲವೂ ಇದೆ. ರೋಹಿತ್ ಚಕ್ರತೀರ್ಥ ಮಾಡಿರೋದನ್ನು ಸಂಪೂರ್ಣ ಹಿಂಪಡೆಯಬೇಕು ಎಂದರು.
ಹೊರಟ್ಟಿ ಈಗ ಅಧಿಕಾರದ ಆಸೆಯಿಂದ ಬಿಜೆಪಿ ಸೇರಿದ್ದಾರೆ
ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಬಸವರಾಜ ಹೊರಟ್ಟಿ ಏಳು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 8ನೇ ಸಲ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಹೊರಟ್ಟಿ ಬಿಜೆಪಿಗೆ ಹೋಗುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಈಗ ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ. ಏಳು ಬಾರಿ ಸಾಕಲ್ವಾ ಅವರಿಗೆ? 42 ವರ್ಷ ಸತತ ಪರಿಷತ್ ಸದಸ್ಯರಾದವರು. ಗಿನ್ನೆಸ್ ದಾಖಲೆ ಮಾಡುತ್ತಾರಂತೆ. ಆ ದಾಖಲೆ ಮಾಡೋದು ಅವರಲ್ಲ. ಶಿಕ್ಷಕ ಮತದಾರರು ಆ ದಾಖಲೆ ಮಾಡಿಸೋದು ಎಂದರು.
ಇನ್ನು ಸರ್ಕಾರದ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ. ಸರ್ಕಾರ ಕಳೆದ 4 ವರ್ಷಗಳಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಸಚಿವರು ಮನೆ ಮಂಜೂರಾತಿ ಬಗ್ಗೆ ಆದೇಶ ಪ್ರತಿ ತೋರಿಸಲಿ. ಆಗ ನಾನು ನನ್ನ ಮಾತು ವಾಪಸ್ ಪಡೆಯುತ್ತೇನೆ. ಕುಮಾರಸ್ವಾಮಿ ಅವಧಿಯಲ್ಲಿಯೂ ಒಂದೇ ಒಂದು ಮನೆ ಕೊಟ್ಟಿಲ್ಲ. ನಾವು ಮನೆಗಳಿಗಾಗಿ 16,800 ಕೋಟಿ ಹಣ ಖರ್ಚು ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಸೂರಿಲ್ಲದವರು 20 ಲಕ್ಷ ಜನರಿದ್ದಾರೆಂದು ಅವರೇ ಹೇಳುತ್ತಾರೆ. ಆದರೆ ಬಡವರಿಗೆ ಮನೆ ಕಟ್ಟಿಕೊಡುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ? ಕೆಲಸ ಮಾಡದವರಿಗೆ ಕಾಳಜಿ ಇಲ್ಲದವರಿಗೆ ವೋಟ್ ಹಾಕಬಾರದು ಎಂದರು.
ನಮ್ಮ ಸರ್ಕಾರದಲ್ಲಿ 7 ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ತಂದಿತು. ಅನ್ನಭಾಗ್ಯ ಯೋಜನೆ ಇಲ್ಲದಿದ್ದರೆ ಕೊರೊನಾ ಸಂದರ್ಭದಲ್ಲಿ ಸಂಕಷ್ಟ ಆಗುತ್ತಿತ್ತು. ಅನ್ನ ಆಹಾರವಿಲ್ಲದೆ ಇನ್ನೂ ಸಾಕಷ್ಟು ಜನರು ಸಾಯುತ್ತಿದ್ದರು. ಲಂಚ ಎಷ್ಟಿದೆ ಗೊತ್ತಾ? ಈಶ್ವರಪ್ಪ ಏಕೆ ರಾಜೀನಾಮೆ ಕೊಟ್ಟಾ? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿ 3 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಹಣಕಾಸು ಮಂತ್ರಿಯಾದರೆ ಎಲ್ಲಾ ಸರಿಮಾಡಲು 2 ವರ್ಷ ಬೇಕು. ನಾನು ಸುಮಾರು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ಎಂದೂ ನೋಡಿರಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ. ಸುಮ್ಮನೆ ಭಾಷಣ ಹೊಡೆದುಕೊಂಡು ಇದ್ದಾರೆ. ಕೊರೊನಾ ಸಂದರ್ಭದಲ್ಲಿ ಸುಮಾರು 100 ಉದ್ಯಮಿಗಳ ಆದಾಯ ಹೆಚ್ಚಾಗಿದೆ. 33 ಲಕ್ಷ ಕೋಟಿ ಆದಾಯ ಹೆಚ್ಚಾಯಿತು. ಪ್ರತಿ ರಾಜ್ಯಕ್ಕೆ ಬರುವ 1 ಲಕ್ಷ ಕೋಟಿ ಕಡಿಮೆಯಾಯ್ತು ಎಂದು ಸಿದ್ಧರಾಮಯ್ಯ ಹೇಳಿದರು.