ನಾಲ್ಕನೇ ಅಲೆ ನಿಶ್ಚಿತ : ಆತಂಕ ಪಡುವ ಅಗತ್ಯವಿಲ್ಲ

  • ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಳ
  • ಮಹಾರಾಷ್ಟ್ರದಲ್ಲಿ ಮಾಸ್ಕ್ ಕಡ್ಡಾಯ, ಹೊಸ ನಿಯಮ ಜಾರಿ
  • ಕೇಂದ್ರದಿಂದ 5 ರಾಜ್ಯಗಳಿಗೆ ಎಚ್ಚರಿಕೆ, ನಿಯಂತ್ರಣಕ್ಕೆ ಕಠಿಣ ಕ್ರಮ

ಮುಂಬೈ : ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯ ಗಣನೀಯವಾಗಿ ಹೆಚ್ಚಳವಾಗಿದೆ. ಮೂರು ತಿಂಗಳ ಬಳಿಕ ಭಾರತದಲ್ಲಿ ಪ್ರತಿ ದಿನದ ಕೇಸ್ 4,000 ಗಡಿ ದಾಟಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಒಂದೊಂದೆ ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿಯಾಗಿದೆ. ಮಹಾರಾಷ್ಟ್ರದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಯವಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯಾದ ಬೆನ್ನಲ್ಲೇ 4 ನೇ ಅಲೆಯ ಭೀತಿ ಶರುವಾಗಿರುವುದರಿಂದ ಆರೋಗ್ಯ ಇಲಾಖೆಯ ತಜ್ಞರ ಸಭೆ ನಡೆಸಿ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲು ಸಲಹೆ ನೀಡಿದ್ದಾರೆ.

ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯಗೊಳಿಸುವ ಜೊತೆಗೆ ಕೊರೊನಾ ಮಾರ್ಗಸೂಚಿ ಮತ್ತೆ ಜಾರಿಗೊಳಿಸುವ ಬಗ್ಗೆಯೂ ತಜ್ಞರು ಸಲಹೆ ನೀಡಿದ್ದಾರೆ. ಇನ್ನು ಜಿನೋಮಿಕ್ ಸೀಕ್ವೆನ್ಸ್, ಟೆಸ್ಟಿಂಗ್ ಹೆಚ್ಚಳ ಮಾಡಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ  ಸಂಖ್ಯೆ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಹೊಸ ಕೋವಿಡ್ ತಳಿ ಕಾಣಿಸಿಕೊಂಡರೆ ನಾಲ್ಕನೇ ಅಲೆ ನಿಶ್ಚಿತವಾದರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ 2-3 ವಾರಗಳು ನಿರ್ಣಾಯಕವಾಗಿದ್ದು, ಕೊವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತು ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಏರಿಕೆಯಾಗಿದ್ದರೂ ಸಹ  ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಅಂಕಿ-ಅಂಗಳ ಪ್ರಕಾರ, ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಪೈಕಿ ಶೇ.1ರಷ್ಟು ರೋಗಿಗಳಷ್ಟೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ ಸೋಂಕು ಹೆಚ್ಚು ಅಪಾಯವನ್ನು ಹುಟ್ಟು ಹಾಕುವುದಿಲ್ಲ, ಈ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಮುಂಬೈನಲ್ಲಿರುವ 24,579 ಹಾಸಿಗೆಗಳಲ್ಲಿ ಸೋಮವಾರ ಶೇ. 0.74ರಷ್ಟು ಮಾತ್ರ ಭರ್ತಿಯಾಗಿವೆ. 4,768 ಆಕ್ಸಿಜನ್ ಹಾಸಿಗೆಗಳಲ್ಲಿ ಶೇ.0.29% ಮಾತ್ರ ತುಂಬಿವೆ. ಮುಂಬೈನಲ್ಲಿ ಸೋಮವಾರ 676 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಕಳೆದ ಏಳು ದಿನಗಳಲ್ಲಿ, ಥಾಣೆಯಲ್ಲಿ ಶೇ.17.17, ಪುಣೆಯಲ್ಲಿ ಶೇ7.42, ರಾಯಗಡ ಶೇ.3.36 ಮತ್ತು ಪಾಲ್ಘರ್ ಶೇ.2 ನಂತರ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಮುಂಬೈ ಶೇ.67.28 ರಷ್ಟಿವೆ.

ಕೊರೊನಾ 4ನೇ ಅಲೆ ಎದುರಿಸಲು ಈಗಿನಿಂದಲೇ ತಯಾರಿ ಶುರುವಾಗಿದೆ. ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದ್ದು ಇಂದು ಸಂಜೆ 7 ಗಂಟೆಗೆ ಟಾಸ್ಕ್ ಫೋರ್ಸ್ ಜತೆ ಇಲಾಖೆಯ ಮಹತ್ವದ ಸಭೆ ನಡೆಸಲಿದೆ. ಕೊರೊನಾ ಪ್ರಕರಣ ಹೆಚ್ಚಳ ಸಂಬಂಧ ಚರ್ಚೆ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ.

ಟೆಸ್ಟಿಂಗ್‌ ಹೆಚ್ಚಿಸಿ: ಕರ್ನಾಟಕ ಸೇರಿ 5 ರಾಜ್ಯಕ್ಕೆ ಕೇಂದ್ರ ಪತ್ರ : 4ನೇ ಅಲೆ ಭೀತಿ ನಡುವೆಯೇ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಹೊಸ ಕೋವಿಡ್‌ ಕ್ಲಸ್ಟರ್‌ಗಳು ಉಗಮವಾಗಿ ಕೊರೋನಾ ಪ್ರಕರಣ ಮತ್ತು ಪಾಸಿಟಿವಿಟಿ ದರ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಈ ರಾಜ್ಯಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಶುಕ್ರವಾರ ಪತ್ರ ಬರೆದಿದ್ದಾರೆ. ಈ 5 ರಾಜ್ಯಗಳು ದೇಶದ ಒಟ್ಟಾರೆ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚು ಪಾಲು ಹೊಂದಿವೆ. ಹೀಗಾಗಿ ಭೂಷಣ್‌ ಈ ರಾಜ್ಯಗಳಿಗೆ ಪತ್ರ ರವಾನಿಸಿದ್ದಾರೆ.

‘ನಿಮ್ಮ ರಾಜ್ಯಗಳಲ್ಲಿ ಕೋವಿಡ್‌ ನಿಗಾ ಕಾರ್ಯ ಚುರುಕುಗೊಳಿಸಬೇಕು. ಟೆಸ್ಟಿಂಗ್‌ ಹೆಚ್ಚಿಸಬೇಕು. ನಿಗದಿಪಡಿಸಿದ ಸ್ಯಾಂಪಲ್‌ಗಳ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸಬೇಕು’ ಎಂದು ಭೂಷಣ್‌ ಸೂಚಿಸಿದ್ದಾರೆ.ಇದಲ್ಲದೆ, ‘ವಿಷಮಶೀತ ಜ್ವರ (ಐಎಲ್‌ಐ) ಹಾಗೂ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಮೇಲೆ ನಿಗಾ ಇಡಬೇಕು. ಇದರಿಂದ ಆರಂಭದಲ್ಲೇ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *