ಕಾಶ್ಮೀರದ ಹತ್ಯೆಗಳಿಗೆ ʻ ಕಾಶ್ಮೀರ್‌ ಫೈಲ್ಸ್‌ʼ ಚಿತ್ರ ಕಾರಣ!?

ಬಾಲಿವುಡ್ ಅಂಗಳದಲ್ಲಿ “ದಿ ಕಾಶ್ಮೀರಿ ಫೈಲ್ಸ್” ಎನ್ನುವ ಸಿನಿಮಾ ಬಿಡುಗಡೆಯಾದಾಗಿನಿಂದ ರಾಜಕೀಯ ಕೆಸರೆರಚಾಟ ನಡೆಯುತ್ತಲೇ ಇದೆ.  ಆ ಸಿನೆಮಾವನ್ನು ಪ್ರಧಾನಮಂತ್ರಿ ಆದಿಯಾಗಿ ಕೇಂದ್ರ ಸಚಿವರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಈ ಸಿನಿಮಾ ನೋಡುವಂತೆ ಕರೆ ನೀಡಿದ್ರುದ. ಇಂದು ಕಣಿವೆ ರಾಜ್ಯದಲ್ಲಿ ಆವರಿಸಿದ ಕತ್ತಲೆಗೆ ಅದೊಂದು ಸಿನಿಮಾ ನೀಡಿದ ಸಂದೇಶ ಕಾರಣವಾಯಿತೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.  ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆ ಕಾಣುತ್ತಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ “ದಿ ಕಾಶ್ಮೀರಿ ಫೈಲ್ಸ್” ಚಲನಚಿತ್ರ 2022ರ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಈ ಚಿತ್ರದಲ್ಲಿ ಚಿತ್ರಿಸಲಾಗಿತ್ತು. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾದ ಬಗ್ಗೆ ಕೇಂದ್ರ ಸಚಿವರು ಪರೋಕ್ಷವಾಗಿ ಪ್ರಚಾರ ನಡೆಸಿದರು.

ದೇಶದ ಹಲವು ರಾಜ್ಯಗಳಲ್ಲಿ “ದಿ ಕಾಶ್ಮೀರಿ ಫೈಲ್ಸ್” ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಯಿತು. ಒಂದು ಹಂತದಲ್ಲಿ ಹಿಂದೂಗಳು ಈ ಸಿನಿಮಾವನ್ನು ನೋಡಲೇಬೇಕು ಎನ್ನುವ ಸಂದೇಶವನ್ನು ಸಾರುವ ಪ್ರಯತ್ನವೂ ನಡೆಯಿತು. ಇನ್ನೂ ಕೆಲವು ರಾಜ್ಯಗಳಲ್ಲಿ “ದಿ ಕಾಶ್ಮೀರಿ ಫೈಲ್ಸ್” ಚಿತ್ರವನ್ನು ಉಚಿತವಾಗಿಯೇ ಪ್ರದರ್ಶಿಸಲಾಯಿತು. ಹೀಗೆ ಹೊಸ ಅಲೆ ಸೃಷ್ಟಿ ಮಾಡಿದ ಸಿನಿಮಾ, ಹಳೆಯ ನೆನಪುಗಳನ್ನು ಕೆದಕಿತು. ಆ ಹಳೆಯ ಘಟನೆಗಳು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ಅಲ್ಲಿಂದ ಮತ್ತೆ ಕಾಶ್ಮೀರದಲ್ಲಿ ಹಿಂಸಾಚಾರ ಮತ್ತು ಗುಂಡಿನ ದಾಳಿ, ಪಂಡಿತರಿಗೆ ಬೆದರಿಕೆಯ ಆಟ ಶುರುವಾಯಿತು ಎಂಬ ಅನುಮಾನಗಳನ್ನು ಹಲವರು ವ್ಯಕ್ತ ಪಡಿಸಿದ್ದಾರೆ.

ʻದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕಾರಣದಿಂದಾಗಿ ಕಾಶ್ಮೀರದಲ್ಲಿ ಉದ್ದೇಶಪೂರ್ವಕ ಹತ್ಯೆಗಳು ನಡೆಯುತ್ತಿವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಹೇಳಿದ್ದಾರೆ. ‘ಚಿತ್ರಕ್ಕೆ ಬಿಹಾರದಲ್ಲಿಯೂ ತೆರಿಗೆ ವಿನಾಯಿತಿ ನೀಡಬೇಕು ಎಂದು ಬಿಜೆಪಿಯು ನಿತೀಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿತ್ತು. ಹಲವು ಸಚಿವರು ಮತ್ತು ಶಾಸಕರು ಸರ್ಕಾರದ ದುಡ್ಡಿನಲ್ಲಿ ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಹೋಗಿದ್ದರು. ನಾಗರಿಕರಲ್ಲಿ ಭಯ ಹುಟ್ಟಿಸಲು ಉಗ್ರಗಾಮಿಗಳೇ ಈ ಚಿತ್ರ ನಿರ್ಮಾಣ ಮಾಡಿರಬಹುದು ಎಂದು ನಾನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಸಿನಿಮಾ ನಿರ್ಮಾಪಕರ ಉಗ್ರ ನಂಟಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಂಜಿ ಆಗ್ರಹಿಸಿದರು. ದಿ ಕಾಶ್ಮೀರ್‌ ಫೈಲ್ಸ್ ತಯಾರಿಕೆಯ ಉದ್ದೇಶವು ಕಾಶ್ಮೀರಿ ಪಂಡಿತರಲ್ಲಿ ಭಯವನ್ನು ಉಂಟುಮಾಡುವುದಾಗಿದೆ. ಹೀಗೆ ಮಾಡಿದರೆ ಅವರು ಮರಳಿ ಕಣಿವೆಗೆ ಹಿಂತಿರುಗುವುದಿಲ್ಲ. ಕಣಿವೆಯಲ್ಲಿ ವಾಸಿಸುವ ಹಿಂದೂಗಳು ಸಹ ಭೀತಿಯಲ್ಲೇ ಬದುಕಬೇಕಾಗುತ್ತದೆ. ಬಿಹಾರಿ ಕಾರ್ಮಿಕರ ಉದ್ದೇಶಿತ ಹತ್ಯೆಗಳೂ ಕೂಡ ಇದೇ ಸಂಚಿನ ಭಾಗವಾಗಿದೆ. ನನ್ನ ಮಾತು ನಿಜವಾಗಿದೆ’ ಎಂದು ಅವರು ಹೇಳಿದರು.  ಕಳೆದ ಗುರುವಾರ ಗುರುವಾರ ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಕೊಂದಿದ್ದರು. ಮೃತ ದಿಲ್ಖಾಸ್, ಇಟ್ಟಿಗೆಗೂಡಿನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಜೊತೆಗೆ ಮತ್ತೊಬ್ಬ ವಲಸೆ ಕಾರ್ಮಿಕನಿಗೂ ಗುಂಡೇಟು ಬಿದ್ದಿತ್ತು. ಅದಕ್ಕೂ ಮೊದಲು, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು ಎಂದು ಮಾಂಝಿ ಆಕ್ರೋಶ ಹೊರಹಾಕಿದ್ದಾರೆ.

ಕಾಶ್ಮೀರಿ ಫೈಲ್ಸ್‌ ಚಿತ್ರ ತಂಡದ ಜೊತೆ ಪ್ರಧಾನಿ ಮೋದಿ

‘ದ ಕಾಶ್ಮೀರ ಫೈಲ್ಸ್’ ಚಿತ್ರವನ್ನು ದೇಶಾದ್ಯಂತ ಅದ್ದೂರಿಯಿಂದ ಸಂಭ್ರಮಿಸಲಾಯಿತು. ”ಕಾಶ್ಮೀರಿ ಪಂಡಿತರ ಹತ್ಯೆಗಳು ನಡೆದವು ಮತ್ತು 1990ರಲ್ಲಿ ಜನಾಂಗೀಯ ಹತ್ಯೆ ನಡೆಯಿತು. ಯಾಕೆಂದರೆ ಆ ಸಂದರ್ಭದಲ್ಲಿ ಭಾರತದಲ್ಲಿ ದುರ್ಬಲ ಮತ್ತು ಹೇಡಿ ಸರಕಾರವಿತ್ತು” ಎಂಬುದಾಗಿ ಈ ಚಿತ್ರವು ಪ್ರತಿಪಾದಿಸುತ್ತದೆ. ಈ ಚಿತ್ರವನ್ನು ಬಿಜೆಪಿ ಅಭೂತಪೂರ್ವ ರೀತಿಯಲ್ಲಿ ಪೋಷಿಸಿತು. ಈಗ ಮತ್ತದೇ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಭಯೋತ್ಪಾದಕರು ಪುನರಾರಂಭಿಸಿದ್ದಾರೆ ಹಾಗೂ ಇನ್ನೊಂದು ಸಮರವನ್ನು ಆರಂಭಿಸಿದ್ದಾರೆ. ಹಾಗಾದರೆ, ಈಗಿನ ಸರಕಾರವನ್ನು ನೀವು ಏನೆಂದು ಕರೆಯುತ್ತೀರಿ? ಎಂದು ಚಿಂತಕ ಶೇಖರ್‌ ಗುಪ್ತಾ ಪ್ರಶ್ನಿಸಿದ್ದಾರೆ.

ದಿ ಪ್ರಿಂಟ್‌ಗೆ ಬರೆದಿರುವ ಲೇಖನದಲ್ಲಿ ಶೇಖರ್‌ ಗುಪ್ತಾ ಹೇಳುತ್ತಾರೆ,  “ನೀವು ಮೋದಿ ಸರಕಾರದ ಕಟ್ಟಾ ಅಭಿಮಾನಿ”ಯಾದರೆ ಹಾಗೂ ಇದ್ದುದನ್ನು ಇದ್ದ ಹಾಗೆ ಹೇಳಿರುವುದಕ್ಕೆ ನನ್ನ ವಿರುದ್ಧ ಆಕ್ರೋಶಗೊಂಡಿದ್ದರೆ, ನೀವು ನನಗೊಂದು ಪ್ರಶ್ನೆಯನ್ನು ಕೇಳಬಹುದು: ”ನೆಹರೂ-ಗಾಂಧಿ-ಅಬ್ದುಲ್ಲಾ-ಮುಫ್ತಿ ಕುಟುಂಬಗಳು ಹಾಗೂ ಪಾಕಿಸ್ತಾನ ಮತ್ತು ಇಸ್ಲಾಮಿಕ್ ಮೂಲಭೂತವಾದವು 70 ವರ್ಷಗಳಲ್ಲಿ ಹದಗೆಡಿಸಿದ ಪರಿಸ್ಥಿತಿಯೊಂದನ್ನು ಮೋದಿ ಸಂಪೂರ್ಣವಾಗಿ ಸಾಮಾನ್ಯೀಕರಿಸಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಅದಕ್ಕೆ ಸಮಯ ತಗಲುತ್ತದೆ”. ನೀವು ತಾಳ್ಮೆಯಿಂದಿರಬೇಕು. ಇದು ನನ್ನ ನಿಲುವು ಕೂಡ ಆಗಿದೆ ಎಂದು

ಸ್ವತಂತ್ರ ಭಾರತದ ನಿಜವಾದ ಇತಿಹಾಸವು 2014ರ ಬೇಸಿಗೆಯಲ್ಲಷ್ಟೇ ಆರಂಭವಾಯಿತು ಎಂಬ ನಂಬಿಕೆಯೇ ಈ ಸಮಸ್ಯೆಗೆ ಮೂಲವಾಗಿದೆ. ಅದಕ್ಕಿಂತ ಮೊದಲು ಈ ದೇಶದಲ್ಲಿ ನಡೆದದ್ದೆಲ್ಲ ರಾಷ್ಟ್ರೀಯ ಹಿತಾಸಕ್ತಿ ಯೊಂದಿಗೆ ರಾಜಿ ಮಾಡಿಕೊಂಡದ್ದು. ಈ ಭಾವನೆ ನಿಮ್ಮಲ್ಲಿದ್ದರೆ, ಕಾಶ್ಮೀರ ಸೇರಿದಂತೆ ಎಲ್ಲದರಲ್ಲೂ ಇತಿಹಾಸ ಹೊಸದಾಗಿ ಆರಂಭಗೊಳ್ಳಬೇಕು ಎಂಬುದಾಗಿ ನೀವು ನಿರೀಕ್ಷಿಸುತ್ತೀರಿ. ಉರಿ, ಬಾಲಾಕೋಟ್, 370ನೇ ವಿಧಿ, ದ ಕಾಶ್ಮೀರ್ ಫೈಲ್ಸ್‌ಗಳಲ್ಲಿ ನೀವು ಸಂಭ್ರಮಾಚರಣೆ ಮಾಡುತ್ತೀರಿ.

ಇದನ್ನೂ ಓದಿ : ಸಾಮಾಜಿಕ ಜಾಲತಾಣದ ತುಂಬ ” ಕಾಶ್ಮೀರ್‌ ಫೈಲ್ಸ್‌” ದೇ ಚರ್ಚೆ

ಬಳಿಕ, ಪತ್ರಿಕೆಗಳಲ್ಲಿ ದೈನಂದಿನ ಸುದ್ದಿಗಳು ಒಂದೇ ರೀತಿಯಾಗಿರುತ್ತವೆ. ಹಿಂದೂಗಳ, ಅದರಲ್ಲೂ ಮುಖ್ಯವಾಗಿ ಪಂಡಿತರ ಹತ್ಯೆಗಳು. ಟಿವಿ ಸೇನಾನಿಗಳು ಹಿಂದಿನಂತೆಯೇ ಆಕ್ರೋಶಿತರಾಗುತ್ತಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಿ, ಅಪವಿತ್ರ ಜಿಹಾದಿ ಮನೋಸ್ಥಿತಿಯ ವಿರುದ್ಧ ಪವಿತ್ರ ಯುದ್ಧ ಆರಂಭಿಸಿ ಎಂಬುದಾಗಿ ಕಿರುಚಾಡುತ್ತಾರೆ.

ಈಗ ನಿಮ್ಮ ಪ್ರಶ್ನೆಯನ್ನು ನಿಮಗೆ ತಿರುಗಿಸಿ ಕೇಳುವುದು ನನ್ನ ಸರದಿ. ನಿಮಗೆ ಬೇಕಾದ ಸರಕಾರವನ್ನು ನೀವು ಆರಿಸಿದ್ದೀರಿ ಎಂಬ ಒಂದೇ ಕಾರಣಕ್ಕೆ, ಪ್ರಬಲ ಸೇನೆಗಳಿರುವ ಮತ್ತು ಪರಸ್ಪರ ಸಂಪೂರ್ಣ ಅಪನಂಬಿಕೆ ಹೊಂದಿರುವ ಎರಡು ಪರಮಾಣುಶಕ್ತ ದೇಶಗಳ ನಡುವಿನ ಈ ಗಂಭೀರ ವಿವಾದವು ಇತ್ಯರ್ಥಗೊಳ್ಳಬೇಕೇಂದು ನೀವು ನಿರೀಕ್ಷಿಸುವಿರೇ? ಕಾಶ್ಮೀರ ವಿವಾದ ಇತ್ಯರ್ಥಕ್ಕೆ ತಾಳ್ಮೆ, ವಾಸ್ತವಿಕತೆಯ ಜ್ಞಾನ ಮತ್ತು ಸ್ವಲ್ಪ ವಿನಯ ಬೇಕು. ಯಾವುದೇ ದೊಡ್ಡ ಸುದ್ದಿ, ಇನ್ನೊಂದು ಭಯಾನಕ ಭಯೋತ್ಪಾದಕ ದಾಳಿ (ಹಾಗೆ ಆಗುವುದು ಬೇಡ)ಯೂ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದಿಲ್ಲ. ಯಾವುದೇ ದೊಡ್ಡ ಸುದ್ದಿ, 2019 ಆಗಸ್ಟ್ 5ರ ನಿರ್ಧಾರಗಳಿಗೆ ಸಂಬಂಧಿಸಿದ ಸುದ್ದಿಯಾದರೂ ಬಿಕ್ಕಟ್ಟನ್ನು ಕೊನೆಗೊಳಿಸುವುದಿಲ್ಲ.

ಸಂವಿಧಾನದ 370ನೇ ವಿಧಿಯ ಕುರಿತ ನಿರ್ಧಾರವನ್ನು ಶ್ಲಾಘಿಸುವುದು ಮತ್ತು ಜೊತೆ ಜೊತೆಗೇ ಕಣಿವೆಯಲ್ಲಿನ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ ಎಂದು ಹೇಳುವುದು- ಈ ವೈರುಧ್ಯವನ್ನು ಈಗ ನಾವೀಗ ನಿವಾರಿಸೋಣ. ಆ ಸಾಂವಿಧಾನಿಕ ನಿರ್ಧಾರವನ್ನು ಉನ್ನತ ರಾಜಕೀಯ-ತಂತ್ರಗಾರಿಕೆಯ ಆಧಾರದಲ್ಲಿ ತೆಗೆದುಕೊಳ್ಳಲಾಗಿತ್ತು. ಅದು ವಾಸ್ತವಿಕ ಸ್ಥಿತಿಯನ್ನು ಆಧರಿಸಿದ ತಂತ್ರಗಾರಿಕೆ ಆಗಿರಲಿಲ್ಲ. ಆ ಸಾಂವಿಧಾನಿಕ ನಿರ್ಧಾರವು ಭಯೋತ್ಪಾದನೆ, ಹಿಂಸೆ, ಪರಕೀಯತೆ ಮತ್ತು ಕಣಿವೆಯಲ್ಲಿನ ‘ಜಿಹಾದ್’ನ್ನು ಕೊನೆಗೊಳಿಸುತ್ತದೆ ಎಂದು ನಿರೀಕ್ಷಿಸುವುದು ಆಶಯವಷ್ಟೆ.

ಇಡೀ ಕಾಶ್ಮೀರವನ್ನು ಪೂರ್ಣ ಪ್ರಮಾಣದಲ್ಲಿ ಸೇನೆಯ ನಿಯಂತ್ರಣಕ್ಕೆ ತಳ್ಳಿ ಶಾಂತಿ ಸ್ಥಾಪಿಸಲು ಮುಂದಾದ ಕೇಂದ್ರ ಸರಕಾರದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಅಲ್ಲಿ ಉಗ್ರರಿಂದ ನಡೆಯುತ್ತಿರುವ ನಾಗರಿಕರ ಹತ್ಯೆಗಳು ತಿಳಿಸುತ್ತವೆ. ರಾಜಸ್ತಾನ ಮೂಲದ ಬ್ಯಾಂಕ್ ಅಧಿಕಾರಿಯೊಬ್ಬ ಉಗ್ರರಿಂದ ಹತ್ಯೆಗೀಡಾಗಿರುವುದು ಕಾಶ್ಮೀರದಲ್ಲಿ ನಿಯೋಜಿತರಾಗಿರುವ ವಿವಿಧ ಸಂಸ್ಥೆ ಮತ್ತು ಇಲಾಖೆಗಳ ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಇತ್ತೀಚೆಗೆ ರಜನಿಬಾಲಾ ಎಂಬ ಶಿಕ್ಷಕಿಯನ್ನು ಉಗ್ರರು ಗುಂಡಿಟ್ಟು ಕೊಂದಿದ್ದರು. 90ರ ದಶಕದ ಅವಾಂತರಗಳ ಬಳಿಕ ಕಾಶ್ಮೀರದಲ್ಲಿ ನಾಗರಿಕರ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವುದು ಇದೇ ಮೊದಲು. ಜೊತೆಗೆ ಕಾಶ್ಮೀರದ ಪಂಡಿತರು ಇದೇ ಮೊದಲ ಬಾರಿಗೆ ಅಭದ್ರತೆಯ ಕಾರಣಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶೇಖರ್‌ ಗುಪ್ತಾ

ಇದೇ ಮಾರ್ಚ್‌ನಲ್ಲಿ ಬಿಡುಗಡೆಯಾದ ‘ದಿ ಕಾಶ್ಮೀರ್‌ ಫೈಲ್ಸ್‌’ ಎಂಬ ಸಿನಿಮಾ, ಪಂಡಿತರ ಹತ್ಯೆ ಪ್ರಕರಣಗಳು ತೀವ್ರವಾಗಿ ಹೆಚ್ಚಲು ಒಂದು ಕಾರಣ ಎಂಬ ವಾದವೂ ಇದೆ. ‘ಈ ಸಿನಿಮಾವು ನಮ್ಮ ಮೇಲಿನ ದಾಳಿ ಅಪಾಯವನ್ನು ಹೆಚ್ಚಿಸಿತು’ ಎಂದು ಕಾಶ್ಮೀರಿ ಪಂಡಿತ್‌ ಸಂಘರ್ಷ ಸಮಿತಿಯ ಅಧ್ಯಕ್ಷ ಸಂಜಯ ಟಿಕೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಸದ್ಯದ ಸ್ಥಿತಿಯಲ್ಲಿ ನನಗೆ ಯಾವುದೇ ಆಶಾಕಿರಣ ಕಾಣಿಸುತ್ತಿಲ್ಲ. ಸೇನೆ, ಪೊಲೀಸ್ ಪಡೆಗೆ ಸಿನಿಮಾವನ್ನು ತೋರಿಸಲಾಗಿದೆ… 16–25 ವರ್ಷ ವಯೋಮಾನದವರಿಗೆ ಸಿನಿಮಾ ತೋರಿಸಿದರೆ ಅದು ನಿಜ ಎಂದು ಅವರು ನಂಬುತ್ತಾರೆ. ಚಿತ್ರಮಂದಿರಗಳಲ್ಲಿ ‘ಜೈ ಶ್ರೀರಾಂ’ ಎಂಬ ಘೋಷಣೆ ಕೂಗಿದ್ದು ಏಕೆ? ಹಾನಿ ಈಗಾಗಲೇ ಆಗಿದೆ. ಧ್ರುವೀಕರಣ ನಡೆದಿದೆ. ವಿರುದ್ಧದ ಪ್ರತಿಕ್ರಿಯೆ ಕಾಶ್ಮೀರದಲ್ಲಿ ಮಾತ್ರ ವ್ಯಕ್ತವಾಗುತ್ತದೆ’ ಎಂದು ಟಿಕೂ ಹೇಳಿದ್ದಾರೆ.

‘1990ರಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಸಹಾನುಭೂತಿ ಇತ್ತು. ಸಂಘರ್ಷದ ದಿನಗಳಲ್ಲಿ ಬೆಳೆದ ಹುಡುಗರು ತಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಈಗ ಕಾಶ್ಮೀರಿ ಪಂಡಿತರಿಗೆ ಏನಾದರೂ ಆದರೆ ತಾವೇನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಕಾಶ್ಮೀರದ ಜನರು ನನಗೆ ಹೇಳಿದ್ದಾರೆ’ ಎಂದು ಸಿಟಿಜನ್ಸ್ ಫಾರ್‌ ಜಸ್ಟಿಸ್‌ ಎಂಡ್‌ ಪೀಸ್‌ (ಸಿಜೆಪಿ) ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಟಿಕೂ ಹೇಳಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ 1990ರ ಜನವರಿ 19ರಂದು ಕಾಶ್ಮೀರ ಪಂಡಿತರ ಮೇಲೆ ನಡೆದ ಹಿಂಸಾಚಾರವನ್ನು ಚಿತ್ರಿಸಲಾಗಿದೆ. ‘ಈ ಹಿಂಸಾಚಾರದಿಂದಾಗಿ 5 ಲಕ್ಷ ಪಂಡಿತರು ಕಾಶ್ಮೀರದಿಂದ ಪಲಾಯನ ಮಾಡಿದರು. 4 ಸಾವಿರ ಪಂಡಿತರು ಹತ್ಯೆಗೀಡಾದರು’ ಎಂದು ಸಿನಿಮಾದಲ್ಲಿ ವಿವರಿಸಲಾಗಿದೆ. ಕೇಂದ್ರ ಸರ್ಕಾರದ ‘ಜಮ್ಮು ಕಾಶ್ಮೀರ ವಲಸಿಗರ ಪುನರ್ವಸತಿ’ ಕುರಿತ ವೆಬ್‌ಸೈಟ್‌ನಲ್ಲಿ 1.35 ಲಕ್ಷ ಹಿಂದೂಗಳು ಪಲಾಯನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಹಾಗಾದರೆ ಪಂಡಿತರ ಹತ್ಯೆ, ವಲಸೆ ಇದರಲ್ಲಿ ಯಾವುದು ಸರಿ ಎಂಬ ಪ್ರಶ್ನೆಗಳ ಬಗ್ಗೆ ಚರ್ಚೆಯಾಗುತ್ತಿವೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ವಲಸೆಗೆ ಕಾರಣ ಯಾರು ?

1990ರ ಕಾಲಘಟ್ಟದಲ್ಲಿ ಕಾಶ್ಮೀರದ ಪಂಡಿತರ ವ್ಯಾಪಕ ವಲಸೆಗೆ ಕಾರಣವಾದ ಹಿಂಸಾಚಾರಗಳಿಗೆ ಕಾರಣವಾದದ್ದು ಅಂದು ಕೇಂದ್ರದಲ್ಲಿದ್ದ ಬಿಜೆಪಿ ಬೆಂಬಲಿತ ಜನತಾದಳ ಸರಕಾರ. ಆ ಸಂದರ್ಭದಲ್ಲಿ ಕಾಶ್ಮೀರದ ರಾಜ್ಯಪಾಲರಾಗಿದ್ದವರು ಇಂದು ಬಿಜೆಪಿಯ ಪ್ರಮುಖರಾಗಿ ರಾರಾಜಿಸುತ್ತಿದ್ದಾರೆ. ಅಂದಿನ ಕೇಂದ್ರ ಸರಕಾರದ ದುರ್ಬಲ ನೀತಿಯೇ ಪಂಡಿತರ ಮೇಲಿನ ದೌರ್ಜನ್ಯಗಳಿಗೆ ಕಾರಣವಾಯಿತು ಎನ್ನುವುದನ್ನು ಇಂದಿಗೂ ಕಾಶ್ಮೀರದ ಪಂಡಿತರು ಆರೋಪಿಸುತ್ತಿದ್ದಾರೆ. ದೇಶವನ್ನು ಒಡೆಯುವುದಕ್ಕೆ ಕಾಶ್ಮೀರದಲ್ಲಿರುವ ಪಂಡಿತರು ಮತ್ತು ಹಿಂದೂಗಳ ಮೇಲೆ ಹೆಚ್ಚು ಹೆಚ್ಚು ದೌರ್ಜನ್ಯಗಳು ನಡೆಯುವುದು ಬಿಜೆಪಿಗೂ ಅಗತ್ಯವಿದ್ದಂತಿತ್ತು. ಕಾಶ್ಮೀರವನ್ನು ತೋರಿಸಿ, ಇಡೀ ಭಾರತದಲ್ಲಿ ಹಿಂದುತ್ವ ರಾಜಕೀಯವನ್ನು ಬಲಪಡಿಸುವುದು ಅವರ ಗುರಿಯಾಗಿತ್ತು. ಈ ಕಾರಣಕ್ಕೆ, ಉಗ್ರರು ಸ್ಥಳೀಯರ ಮೇಲೆ ದಾಳಿ ನಡೆಸಿದಾಗ ಕೇಂದ್ರ ಸರಕಾರ ಸಂಪೂರ್ಣ ಅಸಹಾಯಕತೆಯನ್ನು ವ್ಯಕ್ತಪಡಿಸಿತು. ಬಳಿಕ, ‘ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ’ಕ್ಕಾಗಿ ಮೊಸಳೆ ಕಣ್ಣೀರು ಸುರಿಸಿ, ದೇಶದೆಲ್ಲೆಡೆ ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸಿತು. ಈ ಸಂದರ್ಭದಲ್ಲಿ ಸುಮಾರು 80 ಮಂದಿ ಪಂಡಿತರು ಹತ್ಯೆಗೀಡಾದರು ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಇದೇ ಸಂದರ್ಭದಲ್ಲಿ ಅಮಾಯಕ ಮುಸ್ಲಿಮರು ಸೇರಿದಂತೆ ಇತರ ಸಮುದಾಯದ ಸಾವಿರಕ್ಕೂ ಅಧಿಕ ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದರು. ಯುಪಿಎ ಅಧಿಕಾರಾವಧಿಯಲ್ಲಿ ಮಾತ್ರವಲ್ಲ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ದಾಳಿಗಳು ಇನ್ನಷ್ಟು ಹೆಚ್ಚಿದವು. ಕಾಶ್ಮೀರದಲ್ಲಿ ಸೇನೆಯ ಒಂದು ತಲೆಗೆ ಹತ್ತು ಪಾಕಿಸ್ತಾನಿ ಉಗ್ರರ ತಲೆಗಳನ್ನು ತರುತ್ತೇವೆ ಎಂಬ ಭರವಸೆ ಕೊಟ್ಟ ಮೋದಿ ಸರಕಾರ, ದೊಡ್ಡ ಪ್ರಮಾಣದಲ್ಲಿ ನಮ್ಮ ಸೇನೆಯ ಯೋಧರನ್ನು ಉಗ್ರರಿಗೆ ಬಲಿಕೊಟ್ಟ ಕಳಂಕವನ್ನು ಇದೀಗ ಹೊತ್ತುಕೊಂಡಿದೆ.

 

Donate Janashakthi Media

Leave a Reply

Your email address will not be published. Required fields are marked *