ರಾಜ್ಯಸಭೆ: ಪೂರ್ಣಗೊಂಡ ಆಯ್ಕೆ ಪ್ರಕ್ರಿಯೆ-57 ಸ್ಥಾನಗಳಲ್ಲಿ 41 ಅಭ್ಯರ್ಥಿಗಳು ಅವಿರೋಧ ಆಯ್ಕೆ

  • ಉತ್ತರ ಪ್ರದೇಶ-ತಮಿಳುನಾಡಿನಿಂದ ಅವಿರೋಧ ಆಯ್ಕೆ
  • ಪಿ. ಚಿದಂಬರಂ, ಕಪಿಲ್‌ ಸಿಬಲ್‌, ರಾಜೀವ್‌ ಶುಕ್ಲಾ, ಮಿಸಾ ಭಾರತಿ ರಾಜ್ಯಸಭೆ ಪ್ರವೇಶ

ನವದೆಹಲಿ: ಘೋಷಿಸಲ್ಪಟ್ಟ ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದೆ. ಸ್ಪರ್ಧೆಯಿಂದ ಹಿಂದೆ ಸರಿಯುವ ನಾಮಪತ್ರ ವಾಪಸ್ಸು ಪಡೆಯುವ ಪ್ರಕ್ರಿಯೆಗೆ ನೆನ್ನೆ (ಜೂನ್‌ 03) ಕಡೆ ದಿನವಾಗಿತ್ತು. ಸದ್ಯ 11 ರಾಜ್ಯಗಳಲ್ಲಿ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 16 ಸ್ಥಾನಗಳಿಗೆ ಚುಣಾವಣೆ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ 11, ತಮಿಳುನಾಡಿನಲ್ಲಿ 6,  ಬಿಹಾರದಲ್ಲಿ 5, ಆಂಧ್ರ ಪ್ರದೇಶದಲ್ಲಿ 4, ಮಧ್ಯಪ್ರದೇಶ 3, ಒಡಿಶಾ 3, ಛತ್ತೀಸ್‌ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್‌ನಲ್ಲಿ ತಲಾ ಇಬ್ಬರು ಮತ್ತು ಉತ್ತರಾಖಂಡದಲ್ಲಿ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರಲ್ಲಿ ಕೇಂದ್ರದ ಮಾಜಿ ಸಚಿವರಾದ ಪಿ. ಚಿದಂಬರಂ, ರಾಜೀವ್‌ ಶುಕ್ಲಾ, ಕಪಿಲ್‌ ಸಿಬಲ್‌ ಪ್ರಮುಖರು. ಬಿಜೆಪಿಯ ಸುಮಿತ್ರಾ ವಾಲ್ಮೀಕಿ ಮತ್ತು ಕವಿತಾ ಪಾಟಿದಾರ್, ಆರ್‌ಜೆಡಿಯ ಮಿಸಾ ಭಾರತಿ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರಲ್ಲದೆ, ತಮಿಳುನಾಡಿನಿಂದ ಡಿಎಂಕೆಯ ಎಸ್‌. ಕಲ್ಯಾಣ ಸುಂದರಂ, ಆರ್‌. ಗಿರಿರಾಜನ್‌, ಕೆಆರ್‌ಎನ್‌ ರಾಜೇಶ್‌ ಕುಮಾರ್‌, ಎಐಎಂಡಿಎಂಕೆಯ ಸಿ.ವೆ. ಷಣ್ಮುಗಂ ಹಾಗೂ ಆರ್‌ ಧರ್ಮಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿಯ ಕಲ್ಪನಾ ಸೈನಿ ಆಂಧ್ರ ಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ನ ವಿಜಯಸಾಯಿ ರೆಡ್ಡಿ, ಬೀಡಾ ಮಸ್ತಾನ್‌ ರಾವ್‌, ಆರ್‌. ಕೃಷ್ಣಯ್ಯ ಹಾಗೂ ಎಸ್‌. ನಿರಂಜನ್‌ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದಿಂದ ಕಾಂಗ್ರೆಸ್‌ ಪಕ್ಷದಿಂದ ಹಿರಿಯ ವಕೀಲ ವಿವೇಕ್‌, ಝಾರ್ಖಂಡ್‌ನ‌ಲ್ಲಿ, ಜೆಎಂಎಂ ಪಕ್ಷದ ಮಹುವಾ ಮೊಜಿ, ಬಿಜೆಪಿಯ ಆದಿತ್ಯ ಸಾಹು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷದಿಂದ ರಂಜಿತ್‌ ರಂಜನ್‌, ಪಂಜಾಬ್‌ ಆಡಳಿತಾರೂಢ ಆಮ್‌ ಆದ್ಮಿ ಪಾರ್ಟಿಯ (ಆಪ್‌), ಬಲ್ಬಿರ್‌ ಸಿಂಗ್‌ ಸೀಚೆವಾಲ್‌, ವಿಕ್ರಮ್‌ಜಿತ್‌ ಸಿಂಗ್‌, ಬಿಹಾರದಿಂದ ಮಿಸಾ ಭಾರತಿ, ಫೈಯದ್‌ ಅಹ್ಮದ್‌ (ಆರ್‌ಜೆಡಿ), ಸತೀಸ್‌ ಚಂದ್ರ ದುಬೆ, ಶಂಭು ಶರಣ್‌ ಪಟೇಲ್‌ (ಬಿಜೆಪಿ), ಖೀರು ಮಹತೋ (ಜೆಡಿಯು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಪಿ. ಚಿದಂಬರಂ ಅವರಿಗೆ ಇದು ಎರಡನೇ ಅವಧಿ. ಮೊದಲ ಅವಧಿಯಲ್ಲಿ ಅವರು ಮಹಾರಾಷ್ಟ್ರದಿಂದ ಆಯ್ಕೆ ಆಗಿದ್ದರು. ಚಿದಂಬರಂ ಆಯ್ಕೆಯ ಮೂಲಕ ಕಾಂಗ್ರೆಸ್‌ಗೆ ತಮಿಳುನಾಡಿ ಪ್ರಾತಿನಿಧ್ಯ ಸಿಕ್ಕಂತಾಗಿದೆ. 2016ರಲ್ಲಿ ಚಿದಂಬರಂ ಅವರು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಕೆಲವು ರಾಜ್ಯಗಳಲ್ಲಿ ರಾಜ್ಯಸಭಾ ಚುನಾವಣೆಯ ಕಸರತ್ತು ತಾರಕಕ್ಕೇರಿದ್ದು, ಸ್ಪರ್ಧೆ ಬಿರುಸುಕೊಂಡಿದೆ.

ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನಲ್ಲಿ

ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದ ಕಾಂಗ್ರೆಸ್‌ ಅಭ್ಯರ್ಥಿಗಳ ಜತೆಗೆ ಬಿಜೆಪಿ ಕುದುರೆ ವ್ಯಾಪಾರ ನಡೆಸಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ತನ್ನ 70 ಶಾಸಕರನ್ನು ರಾಜಸ್ಥಾನದ ಉದಯಪುರದ ರೆಸಾರ್ಟ್‌ ನಲ್ಲಿ ಕೂಡಿಹಾಕಿದೆ. ಇವರಲ್ಲಿ ಕೆಲವರು ಸಚಿವರು ಇದ್ದಾರೆಂದು ಪಕ್ಷ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *