ಕೊಪ್ಪಳ: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ತರಬೇತಿ ಪಡೆದ ಜಿಡಿಎ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಿಕೊಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಸಂಘಟನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಸಂಘಟನೆಯ ಕಾರ್ಯಕರ್ತರು ಹಾಗೂ ಜಿಡಿಎ ತರಬೇತಿ ಪಡೆದ ಅಭ್ಯರ್ಥಿಗಳು ಭಾಗವಹಿಸಿದ್ದರು. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರರ್ಕಾರ ಮತ್ತು ರಾಜ್ಯ ಸರರ್ಕಾರದ ಸಹಯೋಗದೊಂದಿಗೆ ಕೋರ್ಸು ಸೃಷ್ಟಿಸಿ 21 ದಿನಗಳ ತರಬೇತಿ ಕೊಟ್ಟು ನಂತರ 3 ತಿಂಗಳ ಆಸ್ಪತ್ರೆಯಲ್ಲಿ ತರಬೇತಿ ನೀಡಲಾಗಿದೆ. ನಂತರ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುವಂತೆ ಸೂಚಿಸಿತ್ತು.
ಅದರಂತೆ, ಹಲವಾರು ವಿಧ್ಯಾರ್ಥಿಗಳು 21 ದಿನಗಳ ತರಬೇತಿ ಮುಗಿಸಿ, 3 ತಿಂಗಳ ಆಸ್ಪತ್ರೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಸಿ ಕಾರ್ಯ ನಿರ್ವಹಿಸಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಇದುವರೆಗೆ ಎಲ್ಲಿಯು ಉದ್ಯೋಗ ದೊರಕದೆ ನಿರುದ್ಯೋಗಿಗಳಾಗಿ ಆತಂಕ ಸ್ಥಿತಿಯಲ್ಲಿದ್ದಾರೆ.
ಹಲವಾರು ಗ್ರಾಮೀಣ ವಿದ್ಯಾರ್ಥಿಗಳಾಗಿದ್ದು, 3 ತಿಂಗಳು ಕಾರ್ಯನಿರ್ವಹಿಸಿದ್ದಾರೆ ತರಬೇತಿಯ ನಂತರ ಬರಬೇಕಾದ ಓಜಿಟಿ ಹಣವು ಬಂದಿಲ್ಲ. ಆದ್ದರಿಂದ ಜಿಡಿಎ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರ ಉದ್ಯೋಗ ಕೊಡಬೇಕೆಂದು ಆಗ್ರಹಿಸಿದರು.
ಕೇಂದ್ರ ಕೌಶಲ್ಯ ಅಭಿವೃದ್ಧಿ ಮಂತ್ರಾಲಯವು ಕೆ.ಎಸ್.ಡಿ.ಸಿ. ವತಿಯಿಂದ ರಾಜ್ಯದಲ್ಲಿ 15 ಸಾವಿರಕ್ಕು ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ಜೊತೆಗೆ ಉದ್ಯೋಗ ನೀಡುವ ಗುರಿ ಹೊಂದಿಕೊಂಡಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 400 ಜನ ಅಭ್ಯರ್ಥಿಗಳು ತರಬೇತಿ ಪಡೆದಿರುತ್ತಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಚರ್ಚಿಸಿ ಉದ್ಯೋಗ ದೊರಕಿಸಿಕೊಡಲು ವಿನಂತಿಸಿಕೊಂಡರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಮನವಿ ಸಲ್ಲಿಸಿದ್ದು, ಜಿಲ್ಲಾ ಅಧಿಕಾರಿಗಳ ಪರವಾಗಿ ಕಛೇರಿಯ ಉನ್ನತ ಅಧಿಕಾರಿಗಳು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಸಂಘಟನೆಯ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳಾದ ನಿಂಗಪ್ಪ, ರಮೇಶ, ಶರಣಪ್ಪ, ಬಸವರಾಜ ಕಾವೇರಿ, ಆಶಾ ಇತರರು ಇದ್ದರು.