ಮಡಿಕೇರಿ: ಕಳೆದ ಮೂರುವರೇ ಸಾವಿರ ವರ್ಷಗಳಿಂದಲೂ ಮಡಿ-ಮೈಲಿಗೆ ಹೆಸರಿನಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಕಾಣಿದೆ, ಕೆಳಸ್ತರಲ್ಲಿಟ್ಟಿದೆ. ಇದನ್ನು ನಾವು ಒಪ್ಪುವುದಿಲ್ಲ. ಆರ್ಯನ್ನರ ಡಿಎನ್ಎ ನೋಡಿದರೆ ಸಾಕು ವಲಸೆ ಬಂದವರೆಂದು ತಿಳಿಯುತ್ತದೆ. ಅವರು ಇರಾನ್, ಪರ್ಷಿಯನ್ ಹಾಗೂ ಮಧ್ಯ ಏಷ್ಯಾದಿಂದ ಬಂದವರು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಂಹಿಸಾ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಕಾಣುತ್ತಿದೆ. ನಮಗೆ, ಬುದ್ಧ, ಬಸವ, ಅಂಬೇಡ್ಕರರು ಹೇಳಿದಂತೆ ಸಮಾನತೆ ಬೇಕಿದೆ. ಆರ್ಯನ್, ಬ್ರಾಹ್ಮಣ್ಯ, ಸಂಸ್ಕೃತ ವೇದ ಇವೆಲ್ಲವೂ ಪರದೇಶದ್ದು. ಭಾರತದಲ್ಲಿ ಹುಟ್ಟಿದ್ದು ಬೌದ್ಧ ಧರ್ಮ, ಬಸವ, ಅಂಬೇಡ್ಕರ್, ಸಿಖ್, ಪೆರಿಯಾರ್ ಧರ್ಮಗಳು ಎಂದು ಹೇಳಿದ್ದಾರೆ.
ಹಿಂದಿನಿಂದಲೂ ಬ್ರಾಹ್ಮಣ್ಯೀಕರಣದಿಂದ ದೇಶದ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ. ಮೇಲು, ಕೀಳು ಎಂಬ ಜಾತಿ ವ್ಯವಸ್ಥೆ ಹುಟ್ಟುಹಾಕಿ ಮೂಲ ನಿವಾಸಿಗಳನ್ನು ಶೋಷಣೆ ಮಾಡುತ್ತಿವೆ. ಇಂತಹವುಗಳನ್ನು ತೊಡೆದು ಹಾಕಬೇಕಾಗಿದೆ. ಮೂಲ ನಿವಾಸಿಗಳು ಅಂದರೆ ಎಸ್ಸಿ, ಎಸ್ಟಿ, ಓಬಿಸಿ ಅಲ್ಪಸಂಖ್ಯಾತರು. ಈ ದೇಶದ ಬಹುಜನರಿಗೆ ನ್ಯಾಯ ದೊರೆಯಬೇಕು. ಮೇಲ್ವರ್ಗದ ಗಂಡಸರೇ ನಮ್ಮನ್ನು ಅಳುತ್ತಿದ್ದಾರೆ. ಅವರಿಂದ ಬ್ರಾಹ್ಮಣ್ಯದ ಅಂಶಗಳು ಹೇರಲ್ಪಟ್ಟು ಶೋಷಣೆ ನಡೆಯುತ್ತಿದೆ. ಇದನ್ನು ತಪ್ಪಿಸಬೇಕಾದರೆ ದೇಶದಲ್ಲಿ ಬಹುದೊಡ್ಡ ಚಳುವಳಿಯೇ ರೂಪುಗೊಳ್ಳಬೇಕಿದೆ ಎಂದು ಕರೆ ನೀಡಿದರು.
ಆರ್ಯನ್ನರು ಪಶ್ಚಿಮ ಏಷ್ಯಾದಿಂದ ಬಂದಿರುವವರು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಸತ್ಯವಿದೆ. ಆರ್ಯರು 3,500 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದವರು. ಸೌರಾಷ್ಟ್ರೀಕರಣದಿಂದ ಪ್ರಭಾವಿತರಾಗಿ ಬಂದಿದ್ದಾರೆ. ಅದಕ್ಕೆ ದಾಖಲೆ, ಅಂಕಿ-ಅಂಶ, ಇತಿಹಾಸವಿದೆ. ಅದನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಆ ಸತ್ಯ ಇತಿಹಾಸ ನಮಗೆ ಬೇಕಾಗಿದೆ ಎಂದು ಹೇಳಿದ್ದಾರೆ.
ನಮಗೆ ರಾಜಕಾರಣಕ್ಕಾಗಿ ಹೇಳುವ ಸುಳ್ಳು ಇತಿಹಾಸ ನಮಗೆ ಬೇಕಿಲ್ಲ. ಹಾಗೆಂದ ಮಾತ್ರಕ್ಕೆ ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಅವರೆಲ್ಲರೂ ಈ ದೇಶದ ನಾಗರಿಕರೇ, ಅವರೆಲ್ಲರೂ ಇಲ್ಲೇ ಬದುಕಬೇಕಾಗಿದೆ ಎಂದು ಚೇತನ್ ಹೇಳಿದರು.