ರಾಂಚಿ:ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ನಿರ್ಬಂಧಿಸಿದ್ದ ಇಂಡಿಗೋ ವಿಮಾನ ಸಂಸ್ಥೆಗೆ ಪ್ರಯಾಣಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವನ್ನು ಇಂಡಿಗೋ ವಿಮಾನ ಹತ್ತದಂತೆ ತಡೆದಿತ್ತು. ಈ ಬಗ್ಗೆ ಮೆ.09 ರಂದು ಸ್ಪಷ್ಟನೆ ನೀಡಿದ್ದ ಇಂಡಿಗೋ ಸಂಸ್ಥೆ ‘ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಶೇಷ ಚೇತನ ಮಗುವು ಭಯಭೀತರಾಗಿದ್ದರಿಂದ ತನ್ನ ಕುಟುಂಬದೊಂದಿಗೆ ಮೇ 7ರಂದು ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ವಿಮಾನ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಮಗು ಶಾಂತವಾಗುತ್ತದೆ ಎಂದು ಕಾದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿತ್ತು.
ಈ ಪ್ರಕರಣವನ್ನು ದೇಶದ ಅತ್ಯುನ್ನತ ವಾಯು ಸಂಚಾರ ನಿಯಂತ್ರಕ ಪ್ರಾಧಿಕಾರವಾಗಿರುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು (ಡಿಜಿಸಿಎ) ನಡೆಸಿತ್ತು. ಇಂಡಿಗೋ ಸಂಸ್ಥೆಯ ಸಿಬ್ಬಂದಿ ವಿಶೇಷಚೇತನ ಮಗುವನ್ನು ನಡೆಸಿಕೊಂಡ ರೀತಿ ಅಸಮರ್ಪಕವಾಗಿದೆ ಮತ್ತು ಈ ಸನ್ನಿವೇಶವನ್ನು ಉದ್ವಿಗ್ನಗೊಳಿಸಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಂಪನಿಯ ಗ್ರೌಂಡ್ ಸ್ಟಾಫ್ಗಳು ವಿಶೇಷ ಚೇತನ ಮಗುವನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಮಗು ಒಳ ಬರದಂತೆ ನಿರಾಕರಣೆ ಮಾಡಿದರು. ಇಂತಹ ಸಮಯದಲ್ಲಿ ಹೆಚ್ಚು ಸೂಕ್ಷ್ಮವಾಗಿ ವರ್ತಿಸಿದ್ದರೆ, ಮಗುವಿನ ಪ್ರಕ್ರಿಯೆಗೆ ಸುಲಭವಾಗುತ್ತಿತ್ತು ಮತ್ತು ಮಗು ಶಾಂತಗೊಳ್ಳುವ ಸಾಧ್ಯತೆ ಇತ್ತು. ಕಂಪನಿಯ ಉದ್ಯೋಗಿಗಳು ಹೀಗೆ ಮಾಡಲಿಲಿಲ್ಲ. ಮನವಿ ಮಾಡಿದರೂ ಸಹ ಪ್ರಯಾಣಿಕ ಬಾಲಕನಿಗೆ ವಿಮಾನವನ್ನು ಹತ್ತಲು ಬಿಡಲೇ ಇಲ್ಲ ಎಂದು ತನಿಖೆಯಿಂದ ಗೊತ್ತಾಗಿದೆ.
ಸನ್ನಿವೇಶವನ್ನು ಸಮಾಧಾನವಾಗಿ ನಿಭಾಯಿಸಿದ್ದರೆ, ಉದ್ವೇಗವನ್ನು ತಗ್ಗಿಸುತ್ತಿತ್ತು. ಮಗುವನ್ನು ಶಾಂತಗೊಳಿಸುತ್ತಿತ್ತು ಮತ್ತು ಪ್ರಯಾಣಿಕರಿಗೆ ವಿಮಾನ ಏರುವುದಕ್ಕೆ ಅನುಮತಿ ನಿರಾಕರಿಸುವಂತಹ ಅತಿರೇಕದ ನಿರ್ಧಾರ ತೆಗೆದುಕೊಳ್ಳುವಂತಹ ಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ವಿಶೇಷ ಪರಿಸ್ಥಿತಿಗಳಲ್ಲಿ ಅಸಾಧಾರಣವಾದ ಪ್ರತಿಕ್ರಿಯೆ ಅತ್ಯಗತ್ಯ. ಆದರೆ ವಿಮಾನಯಾನ ಸಿಬ್ಬಂದಿ ಸಂದರ್ಭಕ್ಕೆ ಅನುಗುಣವಾಗಿ ಸ್ಪಂದಿಸಿಲ್ಲ. ಹಾಗೆಯೇ, ಈ ಪ್ರಕ್ರಿಯೆ ವೇಳೆ ನಾಗರಿಕ ವಿಮಾನಯಾನ ನಿಯಮಗಳ ಅಗತ್ಯಗಳನ್ನು ಪಾಲಿಸುವಲ್ಲಿ ಲೋಪಗಳನ್ನು ಎಸಗಿದೆ ಎಂದು ಡಿಜಿಸಿಎ ಹೇಳಿದೆ.