ಕೆಪಿಎಸ್‌ಸಿ ಫಲಿತಾಂಶ ಪ್ರಕಟಿಸಿ : ಮಾಜಿ ಸಚಿವ ಎಸ್‌.ಸುರೇಶ ಕುಮಾರ್‌ ಪತ್ರ

ಬೆಂಗಳೂರು: ಕೆಪಿಎಸ್‌ಸಿ ಕರ್ನಾಟಕ ನಾಗರಿಕ ಸೇವೆಯ 106 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿ 15 ತಿಂಗಳು ಕಳೆದಿದ್ದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದ ಅಭ್ಯರ್ಥಿಗಳು ಹತಾಶೆಗೊಳಗಾಗಿ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಬಹುದು ಎಂದು ಮಾಜಿ ಸಚಿವ ಎಸ್‌.ಸುರೇಶ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಕೆಪಿಎಸ್‌ಸಿ ನೇಮಕ ಪರೀಕ್ಷೆಯನ್ನು 4 ಬಾರಿ ನಡೆಸಲಾಗಿದೆ. 2017ನೇ ಸಾಲಿನ ನೇಮಕಾತಿಗೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆದ ಮುಖ್ಯ ಪರೀಕ್ಷೆಯ ಫಲಿತಾಂಶವು ಇನ್ನೂ, ಪ್ರಕಟಗೊಂಡಿಲ್ಲ ಹಾಗಾಗಿ ಶೀಘ್ರದಲ್ಲೇ  ಈ ವಿಚಾರದ ಕುರಿತು ಸೂಚನೆ ನೀಡಬೇಕು’ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ  ಬರೆದ ಪತ್ರದಲ್ಲಿ ಸುರೇಶ್‌ ಕುಮಾರ್‌ ವಿನಂತಿಸಿದ್ದಾರೆ.

‘106 ಹುದ್ದೆಗಳಿಗಾಗಿ 2017ನೇ ಸಾಲಿನ ಅಧಿಸೂಚನೆಯು 2020ನೇ ಸಾಲಿನ ಫೆಬ್ರುವರಿ ತಿಂಗಳಲ್ಲಿ ಪ್ರಕಟವಾಗಿದೆ. ಪರೀಕ್ಷೆ ಬರೆದ 1.67 ಲಕ್ಷ ಅಭ್ಯರ್ಥಿಗಳ ಪೈಕಿ 2,200 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. 2020, ಆಗಸ್ಟ್‌ 24ರಂದು ಪೂರ್ವಭಾವಿ ಪರೀಕ್ಷೆ ನಡೆದಿದೆ. 2021ನೇ ಫೆಬ್ರುವರಿ 13 ರಿಂದ 16ರ ವರೆಗೆ ಮುಖ್ಯ ಪರೀಕ್ಷೆಗಳು ನಡೆದಿವೆ. ಇದಾಗಿ 15 ತಿಂಗಳಾದರೂ ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದಿಲ್ಲ’ ಎಂದು  ಪತ್ರದಲ್ಲಿ ಹೇಳಿದ್ದಾರೆ.

ಈ ಬಗ್ಗೆ ದಿನಾಂಕ 24-03-2022 ರಂದು ಕೂಡ ಪತ್ರ ಬರೆದಿದ್ದೆಆದರೆ ಅಭ್ಯರ್ಥಿಗಳಿಗೆ, ನನಗೆ ಈ ವಿಷಯದ ಕುರಿತು ಯಾವ ಮಾಹಿತಿಯು  ಬಂದಿಲ್ಲ ಹಾಗಾಗಿ ಇದೇ ವಿಷಯದ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಲೋಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನೂ ಸಹ ಭೇಟಿ ಮಾಡಿ ವಾಸ್ತವಾಂಶಗಳನ್ನು ವಿವರಿಸಿದ್ದೇನೆ” ಆದರೂ ಸಹ ಯಾವುದೇ ನಿಖರ ಮಾಹಿತಿಗಳಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಸಮೂಹ ಮಾಧ್ಯಮಗಳಲ್ಲಿ ಪದೇಪದೆ ಕೆಪೆಎಸ್‌ ಸಿ ಫಲಿತಾಂಶದ ವಿವಾದಗಳು ವರದಿ ಮಾಡಿ ಸುದ್ದಿಯಾಗುತ್ತಿದೆ ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪರಿಸ್ಥಿತಿಯು ಕೈ ಮೀರುವ ಮುನ್ನ, ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ 2021ನೇ ಫೆಬ್ರವರಿ ತಿಂಗಳಲ್ಲಿ ನಡೆದಿರುವ ಮುಖ್ಯಪರೀಕ್ಷೆಯ ಫಲಿತಾಂಶವನ್ನು ಆದಷ್ಟು ಬೇಗ  ಪ್ರಕಟಿಸಲು ಸೂಚನೆ ನೀಡಬೇಕೆಂದು ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.

ಆಡಳಿತ ವ್ಯವಸ್ಥೆಯ ಬಗ್ಗೆ  ಭರವಸೆ ಹೊಂದಿರುವ  ಯುವಜನತೆ ಹತಾಶೆಗೊಳಗಾಗಿ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಇಂತಹ ಅಪಚಾರವನ್ನು ಮಾಡುವುದರಲ್ಲಿ ನಾವೆಲ್ಲರೂ ಭಾಗಿಯಾಗಲಿದ್ದೇವೆ ಎಂಬ ಎಚ್ಚರಿಕೆಯ ಮಾತನ್ನೂ ಸುರೇಶ್‌ ಕುಮಾರ್‌ ಪತ್ರದಲ್ಲಿ ನಮೂದಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *