ನವದೆಹಲಿ: ಅನಿಲ್ ಬೈಜಾಲ್ ರಾಜೀನಾಮೆಯಿಂದ ತೆರವಾಗಿದ್ದ ಎನ್ಟಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಇದೀಗ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ವಿನಯ್ ಕುಮಾರ್ ಸಕ್ಸೇನಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ವಿನಯ್ ಕುಮಾರ್ ಸಕ್ಸೇನಾ ನೇಮಕ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, “ದೆಹಲಿಯ ಜನರ ಪರವಾಗಿ ನಾನು ಹೊಸದಾಗಿ ನೇಮಕಗೊಂಡ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ದೆಹಲಿಯ ಒಳಿತಿಗಾಗಿ ದೆಹಲಿ ಸರ್ಕಾರದ ಸಂಪುಟದಿಂದ ಸಂಪೂರ್ಣ ಸಹಕಾರ ಪಡೆಯಲಿದ್ದಾರೆ” ಎಂದು ಹೇಳಿದ್ದಾರೆ.
ಮೇ 18 ರಂದು ಹಿಂದಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವೈಯುಕ್ತಿ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿಗಳು ಮೇ 23ರಂದು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದೀಗ ನೂತನವಾಗಿ ನೇಮಕಗೊಂಡಿರುವ ವಿನಯ್ ಕುಮಾರ್ ಸಕ್ಸೇನಾ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಮಾರ್ಚ್ 23, 1958 ರಂದು ಜನಿಸಿದ ವಿನಯ್ ಕುಮಾರ್ ಸಕ್ಸೇನಾ ಕಾನ್ಪುರ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಗೌವರ್ನರ್ ಹುದ್ದೆಗೆ ನೇಮಕಗೊಳ್ಳುವವರೆಗೂ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದರು.
ಅಲ್ಲದೆ, ವಿನಯ್ ಕುಮಾರ್ ಸಕ್ಸೇನಾ ಪೈಲೆಟ್ ಲೆಸೆನ್ಸ್ ಹೊಂದಿದ್ದಾರೆ. ಭಾರತದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಸಮಿತಿಯ ಸದಸ್ಯರಾಗಿದ್ದರು. 2021ರ ಪದ್ಮ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಕೈಗಾರಿಕಾ ಸಂಶೋಧನಾ ಮಂಡಳಿ ಸದಸ್ಯರಾಗಿ ಹಾಗೂ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.