ಬೆಂಗಳೂರು: ಸತತ ಬೆಲೆ ಏರಿಕೆಯಿಂದ ಹಣದುಬ್ಬರ ಪರಿಣಾಮವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನೆನ್ನೆ(ಮೇ 21) ರಾತ್ರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಗಳನ್ನು ಕಡಿತ ಮಾಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಕೂಡಲೇ ತೆರಿಗೆ ಕಡಿತ ಮಾಡಬೇಕಾಗಿತ್ತು. ಆದರೆ, ರಾಜ್ಯದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತ ಮಾಡವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದ್ದು, ರಾಜ್ಯದಲ್ಲಿಯೂ ತೆರಿಗೆ ಕಡಿತ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳದ್ದಾರೆ.
ದಾವೋಸ್ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಸ್ವಿಟ್ಜರ್ಲೆಂಡ್ನ ದಾವೋಸ್ಗೆ ತೆರಳುತ್ತಿದ್ದು ಮೇ 23 ಮತ್ತು 24ರಂದು ನಡೆಯಲಿರುವ ‘ವಿಶ್ವ ಆರ್ಥಿಕ ಶೃಂಗ’ದಲ್ಲಿ ಭಾಗಿಯಾಗುತ್ತೇನೆ. ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗುವೆ. ಹೂಡಿಕೆದಾರರನ್ನು ಸೆಳೆಯಲು ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ದಾವೋಸ್ಗೆ ತೆರಳಿದ ಮುಖ್ಯಮಂತ್ರಿ ತಂಡ
ದಾವೋಸ್ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆ ನಡೆಯುತ್ತಿದ್ದು, ಈ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮುಖ್ಯಮಂತ್ರಿಯೊಂದಿಗೆ ತಮ್ಮ ಪತ್ನಿ ಹಾಗೂ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ 8 ಮಂದಿ ಜೊತೆ ಇಂದು(ಮೇ 22) ಪ್ರಯಾಣ ಬೆಳೆಸಿದರು.
ಈಗಾಗಲೇ ಬೆಂಗಳೂರಿನಿಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿರುವ ತಂಡವು ಇಂದು ಮಧ್ಯಾಹ್ನ 12.45 ಕ್ಕೆ ದುಬೈಗೆ ತಲುಪಲಿದ್ದಾರೆ. ದುಬೈನಿಂದ ಮಧ್ಯಾಹ್ನ 3.35 ಕ್ಕೆ ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ಗೆ ಹೋಗಿ ರಾತ್ರಿ 8.20 ರಿಂದ ಜ್ಯೂರಿಚ್ ನಿಂದ ದಾವೋಸ್ ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ. ರಾತ್ರಿ 12ಕ್ಕೆ ಸಿಎಂ ನೇತೃತ್ವದ ನಿಯೋಗ ದಾವೋಸ್ ತಲುಪಲಿದೆ.