ದೇಶದ ಪ್ರಗತಿ ಬಯಸುವವರು ಎನ್‌ಇಪಿ ವಿರೋಧಿಸುತ್ತಾರೆ : ಫ್ರೊ. ಮುರಿಗೆಪ್ಪ

ಬೆಂಗಳೂರು: “ನಾವು ದೇಶದ ಪ್ರಗತಿಯನ್ನು ಬಯಸುವುದರಿಂದ, ಹೊಸ ಶಿಕ್ಷಣ ನೀತಿ-2020ನ್ನು ವಿರೋಧಿಸುತ್ತಿದ್ದೇವೆ” ಎಂದು ಹಂಪಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಮುರಿಗೆಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಐಡಿಎಸ್‌ಒ ನೇತೃತ್ವದಲ್ಲಿ ಯುವಿಸಿಇ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಸಂಘಟಿಸಿದ್ದ ‘ಹೊಸ ಶಿಕ್ಷಣ ನೀತಿ -2020 ಒಂದು ವಿಮಾರ್ಶಾತ್ಮಕ ಅಧ್ಯಯನ’ ಪುಸ್ತಕ ‌ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಪ್ರೊ. ಮುರಿಗೆಪ್ಪ “ಯಾವ ರೀತಿ ಇಲಿಯ ಬಿಲವನ್ನು ಮುಚ್ಚದೆ ಭತ್ತವನ್ನು ಸಂಗ್ರಹಿಸಲು ಸಾಧ್ಯವಿಲ್ಲವೋ, ಹಾಗೆಯೇ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕನಿಷ್ಠ ಸಿಬ್ಬಂದಿ ಹಾಗೂ ಸೌಲಭ್ಯಗಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿರುವಾಗ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಸದೃಢಗೊಳಿಸದೇ ಉತ್ತಮ ಶಿಕ್ಷಣ ಒದಗಿಸಲು ಸಾಧ್ಯವಿಲ್ಲ. ಯಾವುದೇ ಕನಿಷ್ಠ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಪಾಲಿಸದೆ ರಾತ್ರೋರಾತ್ರಿ ಹೇರಿರುವ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಈಗಾಗಲೇ ಹಲವು ಪಾರಂಪರಿಕ ಕೌಶಲ್ಯಗಳನ್ನು ಹೊಂದಿರುವ ಜನರು ಕನಿಷ್ಠ ಜೀವನದ ಭದ್ರತೆ ಇಲ್ಲದೇ ಕಷ್ಟಪಡುತ್ತಿರುವಾಗ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸದೆ ಕೇವಲ ಪದವಿ, ಪ್ರಮಾಣ ಪತ್ರಗಳ ಸಂಖ್ಯೆ ಹೆಚ್ಚಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದನ್ನೆಲ್ಲ ಅರಿತು ಇಂದಿನ ಅವಶ್ಯಕತೆಯನ್ನು ಆಳ್ವಿಕರಿಗೆ ಮನಗಾಣಿಸುವ ನಿಟ್ಟಿನಲ್ಲಿ ಚಳುವಳಿ ರೂಪಿಸಬೇಕು” ಎಂದು ಅಭಿಪ್ರಾಯಪಟ್ಟರು.

ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಹೆಚ್. ಎಂ. ಸೋಮಶೇಖರಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಪ್ರಸ್ತುತ ಬಂಡವಾಳಶಾಹಿ ವ್ಯವಸ್ಥೆಯೇ ಮೂಲ ಕಾರಣ. ಸರ್ಕಾರಿ ಶಾಲೆಗಳಲ್ಲಿ ಸಮರ್ಪಕ ಶಿಕ್ಷಕರಿಲ್ಲ ಮತ್ತು ಇರುವ ಶಿಕ್ಷಕರನ್ನು ಪಾಠ ಮಾಡುವುದನ್ನು ಬಿಡಿಸಿ ಗುಮಾಸ್ತರ ಕೆಲಸದಲ್ಲಿ ಮುಳುಗಿಸಲಾಗಿದೆ. ವಿಶ್ವವಿದ್ಯಾಲಯಗಳ ಸ್ಥಿತಿಯು ಕೂಡ ಹೀಗೆಯೇ ಇರುವಾಗ ಕಿಂಚಿತ್ತೂ ತಯಾರಿಯಿಲ್ಲದೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವುದು ಸರ್ಕಾರ ಮಾಡಿರುವ ಅಪರಾಧವಾಗಿದೆ. ಈ ನೀತಿಯು ಶಿಕ್ಷಣದ  ಖಾಸಗೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇನ್ನು ಕೆಲವು ದಿನಗಳಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳು ಖಾಸಗಿ ಮ್ಯಾನೇಜ್‌ಮೆಂಟುಗಳ ಕೈವಶವಾಗುವುದರಲ್ಲಿ ಆಶ್ಚರ್ಯವಿಲ್ಲʼʼ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರೋಪದಲ್ಲಿ, ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್  ಮಾತನಾಡಿ, ಎನ್‌ಇಪಿ-2020 ಈ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ದಾಳಿಯಾಗಿದೆ. ಈ ದೇಶದ ನವೋದಯ ಚಳುವಳಿಯ ಹರಿಕಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಧೀಮಂತ ನಾಯಕರ ತ್ಯಾಗ ಬಲಿದಾನಗಳಿಂದ ಸಿಕ್ಕಂತಹ ಶಿಕ್ಷಣವನ್ನು ಇಂದು ದುಡಿಯುವ ವರ್ಗದ ಮಕ್ಕಳಿಂದ ಕಿತ್ತುಕೊಳ್ಳುತ್ತಿರುವ ಸರ್ಕಾರದ ಹೊಸ ಶಿಕ್ಷಣ ನೀತಿಯ ವಿರುದ್ಧ ಪ್ರಬಲ ಚಳುವಳಿಯನ್ನು  ಕಟ್ಟಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಐಡಿಎಸ್ಓನ ಅಖಿಲ ಭಾರತ ಅಧ್ಯಕ್ಷ ವಿ. ಎನ್  ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಸೌರವ್ ಘೋಷ್,  ರಾಜ್ಯಾಧ್ಯಕ್ಷೆ ಅಶ್ವಿನಿ ಕೆ. ಎಸ್ ಉಪಸ್ಥಿತರಿದ್ದರು. ರಾಜ್ಯ ಉಪಾಧ್ಯಕ್ಷ ಹನುಮಂತು ಪಾನೇಗಾಂವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *