- ದಲಿತ ಸಿಎಂ ಕನಸು ಕಾಣುವವನು ಹುಚ್ಚ ಎಂದ ಎ ನಾರಾಯಣಸ್ವಾಮಿ
- ದಲಿತ ಸಿಎಂ ಬಗೆಗಿನ ಚರ್ಚೆ ಕೇವಲ ರಾಜಕೀಯ ತೆವಲು
ಬೆಂಗಳೂರು : ಸಾಕಷ್ಟು ವರ್ಷಗಳಿಂದಲೂ ದಲಿತ ಸಿಎಂ ವಿಚಾರ ಆಗಾಗ ಸದ್ದು , ಗದ್ದಲ ಎಬ್ಬಿಸಿ, ಹಂಗೆ ತಣ್ಣಗಾಗಿಬಿಡುತ್ತದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಾರಿ ಈ ವಿಚಾರವನ್ನು ಮುನ್ನಲೆಗೆ ತಂದವರು ಕೇಂದ್ರ ಸಚಿವ ಎ ನಾರಾಯಣಸ್ವಾಮಿ.
‘ದಲಿತ ನಾಯಕ ಸಿಎಂ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚ. ದಲಿತ ಸಿಎಂ ಎನ್ನುವ ಚರ್ಚೆ ಕೇವಲ ರಾಜಕೀಯ ತೆವಲು’ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದ್ದಾರೆ.
ಆನೇಕಲ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ, ಅವರು ”ದಲಿತರು ಮುಖ್ಯಮಂತ್ರಿ ಆಗುವುದಿಲ್ಲಎಂಬುದಕ್ಕೆ ಹಿಂದಿನ ಘಟನೆಗಳೇ ಉದಾಹರಣೆಗಳಾಗಿವೆ. ಡಾ ಬಿಆರ್ ಅಂಬೇಡ್ಕರ್ ಅವರನ್ನು ಐದು ವರ್ಷ ಮಂತ್ರಿಯಾಗಲು ಯಾವ ರಾಜಕೀಯ ಪಕ್ಷಗಳೂ ಬೆಂಬಲ ನೀಡಲಿಲ್ಲ. ಇನ್ನು, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಶಾಸಕ, ಸಂಸದರಾಗಿದ್ದರು. ಉದ್ದೇಶಪೂರ್ವಕವಾಗಿಯೇ ಅವರನ್ನು ಮುಖ್ಯಮಂತ್ರಿಯಾಗಲು ಬಿಡಲಿಲ್ಲ. ರಾಜಕಾರಣದಲ್ಲಿ ಅವರನ್ನು ಸೋಲಿಸಿದರು,” ಎಂದು ದೂರಿದರು.
”ಕಾಂಗ್ರೆಸ್‌ನಲ್ಲಿ ಡಾ ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಆಗಲು ಬಿಡದೇ ಸೋಲಿಸಿದರು. ಇಂತಹ ಕೆಟ್ಟ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚ,” ಎಂದು ಅವರು ಪ್ರತಿಪಾದಿಸಿದರು.
ದಲಿತ ಸಿಎಂ ಬೇಡಿಕೆ ಇಡಬೇಕಾದ ಸ್ಥಿತಿ ಬರಬಹುದು: ಡಾ.ಜಿ.ಪರಮೇಶ್ವರ್
ಪಂಜಾಬ್ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ದಲಿತ ಸಿಎಂ ಬೇಕೆಂದು ಕೇಳುವಂತಾಗಬಹುದು ಎಂದು ತುಮಕೂರಿನಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ದಲಿತರನ್ನು ಸಿಎಂ ಮಾಡಬೇಕೆಂದು ಕೇಳುವಂತಾಗಬಹುದು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯೂ 3 ಜನ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಈ ಬಾರಿಯೂ ಮೂವರು ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದರು.