ಸಾಮರಸ್ಯ ನಡಿಗೆಗೆ ಹರಿದು ಬಂದ ಜನಸಾಗರ

ಉಡುಪಿ: ಸಾಮರಸ್ಯ ಸಹಬಾಳ್ವೆ ಉಡುಪಿ ಹಾಗೂ ಸೌಹಾರ್ದ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಹಬಾಳ್ವೆ ಸಮಾವೇಶ-ಸಾಮರಸ್ಯದ ನಡಿಗೆಗೆ ವ್ಯಾಪಕ‌ ಸ್ಪಂದನೆ ವ್ಯಕ್ತವಾಗಿದೆ.

ಉಡುಪಿಯ ಮುಖ್ಯ ರಸ್ತೆಯಲ್ಲಿ ಒಂದೂವರೆ ಗಂಟೆಗೂ ಅಧಿಕ ಕಾಲ ನಡೆದ ಸಾಮರಸ್ಯದ ನಡಿಗೆಗೆ ಜನಸಾಗರವೇ ಹರಿದು ಬಂದಿತ್ತು, ಎಲ್ಲೆಡೆ ಸಹಬಾಳ್ವೆಯ ಘೋಷಣೆ ಮೊಳಗಿತು.

ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕದಿಂದ ನಡಿಗೆ ಆರಂಭಗೊಂಡಿದ್ದು, ಸರ್ವೀಸ್ ಬಸ್‌ನಿಲ್ದಾಣದವರೆಗೆ ಸಾಗಿ ಮಿಷನ್ ಕಂಪೌಂಡ್‌ನ ಮೈದಾನದಲ್ಲಿ ಸಮಾಪ್ತಿಗೊಂಡಿತು.

ಸಾಮರಸ್ಯದ ನಡಿಗೆಗೆ ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಆರ್. ಮೋಹನ್‌ರಾಜ್, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್, ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಮಹಿಳಾ ಹಕ್ಕು ಹೋರಾಟಗಾರ್ತಿ ಕೆ.ನೀಲಾ, ಯುವ ಹೋರಾಟಗಾರರಾದ ಸಬೀಹ ಫಾತಿಮ ಹಾಗೂ ನಜ್ಮಾ ಚಿಕ್ಕನೇರಳೆ, ಯೂಸುಫ್ ಕನ್ನಿ, ಫಾದರ್ ವಿಲಿಯಂ ಮಾರ್ಟಿಸ್ ಸಹಿತ ಇತರೆ ಮುಖಂಡರು ಏಳು ಬಣ್ಣದ ಪತಾಕೆಯನ್ನು ಬೀಸುವ ಮೂಲಕ ಹಸಿರು‌ ನಿಶಾನೆ ತೋರಿಸಿ ಬೀಸುವ ಚಾಲನೆ ಕೊಟ್ಟರು.

ಸಾಮರಸ್ಯದ ನಡಿಗೆಯಲ್ಲಿ ಕಂಬಳದ ಕೋಣ, ಹುಲಿವೇಷ, ಚೆಂಡೆ, ನಾಸಿಕ್ ಬ್ಯಾಂಡ್, ಕಂಗಿಲು ನೃತ್ಯ, ಡೊಳ್ಳು ಕುಣಿತ ಧಪ್ ಕುಣಿತ ಮೇಳೈಸಿತು.

ನಾಡಿನ ಮಹಾನ್ ವ್ಯಕ್ತಿಗಳಾದ ಮಹಾತ್ಮಗಾಂಧೀಜಿ, ಡಾ.ಬಿ.ಆರ್.‌ಅಂಬೇಡ್ಕರ್, ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು, ಮದರ್ ತೆರೇಸಾ, ಹಾಜಿ ಅಬ್ದುಲ್ಲಾ, ಮಾಧವ ಮಂಗಲ, ಡಾ.ಟಿಎಂಎ ಪೈ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸ್ತಬ್ದ ಚಿತ್ರಗಳು ಬಹುತ್ವ ಭಾರತವನ್ನು ಪ್ರತಿಬಿಂಬಿಸುತ್ತಿದ್ದವು.

ಕರ್ನಾಟಕ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತಂಡಗಳು, ರಾಷ್ಟ್ರಧ್ವಜ ಹಾಗೂ ಏಳು ಬಣ್ಣದ ಪತಾಕೆ ಹಿಡಿದು ಸಹಸ್ರಾರು ಮಂದಿ ಹೆಜ್ಜೆ ಹಾಕಿದರು.

 

 

Donate Janashakthi Media

Leave a Reply

Your email address will not be published. Required fields are marked *