ಬಿಬಿಎಂಪಿ ಚುನಾವಣೆ: ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಕಾಂಗ್ರೆಸ್‌ ಮನವಿ

ಬೆಂಗಳೂರು: ಸುಪ್ರೀಂಕೋರ್ಟ್ ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳು ಚುನಾವಣೆ ನಡೆಸಬೇಕು ಎಂಬ ತೀರ್ಪು ನೀಡಿದ ಹಿನ್ನೆಲೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಘೋಷಣೆ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಮನವಿ ಮಾಡಿದೆ.

ಬೆಂಗಳೂರು ನಗರ ವಾರ್ಡ್ ವಿಂಗಡನೆ ಮಾಡಲು ಕಾಂಗ್ರೆಸ್ ಪಕ್ಷ ಸಹಕಾರ ನೀಡಿತು. ಅದರೆ ಬಿಜೆಪಿ ಪಕ್ಷ ತಮಿಷ್ಟದಂತೆ  ವಾರ್ಡ್ ವಿಂಗಡನೆ ಮಾಡಲು ಹೊರಟಿತು. ಬಿಬಿಎಂಪಿ ಚುನಾವಣೆ ಮೀಸಲಾತಿಯನ್ನು ಕಾಂತರಾಜ್ ಆಯೋಗ ತೀರ್ಮಾನದಂತೆ ಕೈಗೊಳ್ಳಲಿ. ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ರಾಜ್ಯ ಸರ್ಕಾರ ಚುನಾವಣೆ ನಡೆಸಲಿ. ಭಕ್ತವತ್ಸಲ ಸಮಿತಿ ವರದಿ ಕಾಯುವುದು ಬೇಡ ಇದರಿಂದ ಚುನಾವಣೆ ವಿಳಂಬವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.

ಮನವಿ ಕರಿತು ಮಾತನಾಡಿದ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಲಿ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗದ ಮೀಸಲಾತಿ ನಿರ್ಣಯ ಮಾಡಿ ಚುನಾವಣೆ ನಡೆಸಲಿ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ಸ್ಥಳೀಯ ಚುನಾವಣೆ ಬಗ್ಗೆ ಸ್ಪಷ್ಟವಾಗಿ ಆದೇಶ ನೀಡಿದೆ. ಕಳೆದ ಎರಡು ವರ್ಷದಿಂದ ಜನಪ್ರತಿನಿಧಿಗಳಿಲ್ಲದೆ, ಅಭಿವೃದ್ದಿ ಕುಂಠಿತವಾಗಿದೆ. ಪ್ರಜಾಪ್ರಭುತ್ವ ರಕ್ಷಣೆಗೆ ತಕ್ಷಣ ಆಯೋಗವು ಚುನಾವಣಾ ದಿನಾಂಕ ಘೋಷಣೆ ಮಾಡಿರೆಂದು ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹೇಳಿದ್ದಾರೆ.

ರಾಜ್ಯ ಚುನಾವಣಾ ಆಯೋಗವನ್ನು ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ, ಶಾಸಕ ರಿಜ್ವಾನ್ ಆರ್ಹದ್, ವಿಧಾನಪರಿಷತ್ ಸದಸ್ಯರುಗಳಾದ ಯು.ಬಿ.ವೆಂಕಟೇಶ್, ಪಿ.ಆರ್.ರಮೇಶ್, ಮಾಜಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಮತ್ತು ಮಾಜಿ ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರುಗಳಾದ ಎಮ್.ಶಿವರಾಜು, ಅಬ್ದುಲ್ ವಾಜಿದ್, ರಿಜ್ವಾನ್ ನವಾಬ್, ಸತ್ಯನಾರಾಯಣ್ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಕುಮಾರ್, ಬೆಂಗಳೂರು ನಗರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರುಗಳಾದ ರಾಜ್ ಕುಮಾರ್, ಶೇಖರ್, ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *