ನವದೆಹಲಿ: ಆರ್ಎಸ್ಎಸ್ ಮತ್ತು ಬಿಜೆಪಿಯಿಂದ ದೆಹಲಿಯ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನದ ವಿರುದ್ಧ ಸಾವಿರಾರು ಜನತೆ ಎಡಪಂಥೀಯ ಪಕ್ಷಗಳ ನೇತೃತ್ವದಲ್ಲಿ ದೆಹಲಿ ಉಪರಾಜ್ಯಪಾಲ ಕಛೇರಿವರೆಗೂ ಜಾಥಾ ನಡೆಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್)-ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ಪಕ್ಷದವರು ಮಾಡಿರುವ ದುಷ್ಟಕಾರ್ಯದಿಂದ ಅದೆಷ್ಟೋ ಶ್ರಮಜೀವಿಗಳ ಬದುಕಿನ ಹೊಟ್ಟೆಮೇಲೆ ತಣ್ಣೀರ ಬಟ್ಟೆ ಹಾಕಿದಂತಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಮಿಕರು ಬಿಜೆಪಿ ಮತ್ತು ಆರ್ಎಸ್ಎಸ್ ನವರಿಗೆ ಕಾರ್ಮಿಕರು ಒಗ್ಗಟ್ಟಿನಿಂದ ಸರಿಯಾದ ಪ್ರತ್ಯೋತ್ತರ ನೀಡಲಿದ್ದಾರೆ ಎಂದು ಜಾಥಾದಲ್ಲಿ ಭಾಗವಹಿಸಿದ್ದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯೆ ಬೃಂದ ಕಾರಟ್ ಹೇಳಿದ್ದಾರೆ.
ಜಾಥಾದಲ್ಲಿ ಭಾಗವಹಿಸಿದ್ದ ಸುಚೇತಾ ಡೇ (ಸಿಪಿಐ), ಅಮರ್ಜೀತ್ ಕೌರ್(ಸಿಪಿಐ), ಬಿನೋಯ್ ವಿಶ್ವಮ್ (ರಾಜ್ಯಸಭಾ ಸದಸ್ಯ), ಶತ್ರುಜೀತ್ (ಆರ್ಎಸ್ಪಿ), ಮತ್ತು ಬಿರ್ಜು ನಾಯಕ್ (ಸಿಜಿಪಿಐ) ಅವರುಗಳು ಸಹ ಮಾತನಾಡಿದರು. ದಿನೇಶ್ ವರ್ಸ್ನೆ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಆರ್ಎಸ್ಎಸ್-ಬಿಜೆಪಿ ಪಕ್ಷದ ಜನರ ಮೇಲಿನ ದಬ್ಬಾಳಿಕೆಯ ಪ್ರಯತ್ನಗಳನ್ನು ವಿರೋಧಿಸಲು ಎಡಪಕ್ಷಗಳು ಕರೆ ನೀಡಿದರು. ಸರ್ಕಾರದ ನೀತಿಗಳಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚುತ್ತಿದೆ. ಇದರಿಂದ ದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದರು.
ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ಆರ್ಎಸ್ಪಿ, ಎಐಎಫ್ಬಿ, ಸಿಜಿಪಿಐ ಪಕ್ಷಗಳ ಮುಖಂಡರುಗಳು ಕಾರ್ಯಕರ್ತರು ಸಾರ್ವಜನಿಕ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಜಾಥಾದಲ್ಲಿ 43 ಇತರ ಸಾರ್ವಜನಿಕ ಸಂಸ್ಥೆಗಳೂ ಸಹ ಭಾಗವಹಿಸಿದ್ದವು.
ರಾಷ್ಟ್ರ ರಾಜಧಾನಿ ದೆಹಲಿಯ ಜಹಾಂಗೀರ್ಪುರಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ನಡೆಯುತ್ತಲೇ ಇದೆ. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಉತ್ತರ ದೆಹಲಿ ಪಾಲಿಕೆ ಚಾಲನೆ ನೀಡಿದ್ದು, ಈ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ಮಧ್ಯೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವಿರೋಧಿಸಿ ಸಿಪಿಐ(ಎಂ) ಪಾಲಿಟ್ ಬ್ಯುರೋ ನಾಯಕಿ ಬೃಂದಾ ಕಾರಟ್ ಪ್ರತಿಭಟನೆ ನಡೆಸಿದ್ದು, ಅಕ್ರಮ ಕಟ್ಟಡಗಳನ್ನು ತೆರವು ಮಾಡಿಸಲು ಬಂದಿದ್ದ ಜೆಸಿಬಿ ಯಂತ್ರದ ಮುಂದೆ ನಿಂತು ಸುಪ್ರೀಂ ಕೋರ್ಟ್ ಆದೇಶ ಪ್ರತಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬೃಂದಾ ಕಾರಟ್ ಅವರೊಂದಿಗೆ ಜಹಾಂಗೀರ್ಪುರಿಯ ಸ್ಥಳೀಯರೂ ಕೂಡ ಜೆಸಿಬಿಯ ಯಂತ್ರಕ್ಕೆ ಅಡ್ಡಲಾಗಿ ನಿಂತಿದ್ದರು. ಹಾಗೆಯೇ ಇಂದು ಸಭೆ ನಡೆಸಿ ಇವೆಲ್ಲದಕ್ಕು ಕಾರಣ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ(ಆರ್ ಎಸ್ಎಸ್)ನವರು ನಡೆಸುತ್ತಿರುವ ರಾಜಕಾರಣ ಎಂದು ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.