ಬೆಳಗಾವಿ: ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ 600 ಕೋಟಿ ಸಾಲ ಬಾಕಿ ಆರೋಪದ ವಿಚಾರವಾಗಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಪೆಕ್ಸ್ ಬ್ಯಾಂಕಿನಿಂದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಷ್ಟೇ ಅಲ್ಲದೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬಂಡೆಪ್ಪ ಕಾಶಂಪುರ್ ಸೇರಿದಂತೆ ಅನೇಕರು ಸಾಲ ಪಡೆದಿದ್ದಾರೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 24 ಜನ ಅಪೆಕ್ಸ್ ಬ್ಯಾಂಕಿನಿಂದ ಸುಮಾರು 6000 ಕೋಟಿ ರೂ. ವರೆಗೆ ಸಾಲ ಪಡೆದಿದ್ದಾರೆ. ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಬಂಡೆಪ್ಪ ಕಾಶೆಂಪುರ್ ಸೇರಿದಂತೆ ಅನೇಕರು ಸಾಲ ಪಡೆದಿದ್ದಾರೆ. ಸಾಲ ಪಡೆದವರಿಗೆ ನೋಟಿಸ್ ನೀಡಲಾಗಿದೆ ಎಂದರು.
ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಸಾಲ ಬಾಕಿ ಉಳಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಲ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಲಾಗಿದೆ. ಸಾಲ ಕಟ್ಟದವರ ಆಸ್ತಿ ಜಪ್ತಿ ಹೇಗೆ ಮಾಡಿಕೊಳ್ಳುತ್ತದೆಯೋ ಹಾಗೆಯೇ ಅಪೆಕ್ಸ್ ಬ್ಯಾಂಕ್ ಸೂಕ್ತಕ್ರಮ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ : ದೊಡ್ಡ ಕಾರ್ಪೊರೇಟ್ ಸುಸ್ತಿದಾರರಿಂದ ಕೇವಲ 7% ಬಾಕಿ ವಸೂಲಿ
ಕೆಲವರು ಬಡ್ಡಿ ಮತ್ತು ಅಸಲು ಎರಡನ್ನೂ ಕಟ್ಟಿಲ್ಲ. ತುಮಕೂರು, ದಕ್ಷಿಣ ಕರ್ನಾಟಕ ಸೇರಿದಂತೆ ಡಿಸಿಸಿ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಸಾಲ ವಸೂಲಾತಿಗಾಗಿ ಗಂಭೀರ ಕ್ರಮಕೈಗೊಳ್ಳಲಾಗುವುದು, ಎಷ್ಟು ಕೋಟಿ ರೂ. ಸಾಲ ಪಡೆದಿದ್ದಾರೆ ಎಂಬುದರ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ನಗರದ ಡಿಸಿಸಿ ಬ್ಯಾಂಕಿನಿಂದ ಒಟ್ಟು 1,024 ಕೋಟಿ ರೂ. ಸಾಲ ನೀಡಲಾಗಿದೆ. ಯಾರಿಗೆ ಸಾಲ ಕೊಟ್ಟಿದ್ದಾರೆ? ಯಾರು ಮರುಪಾವತಿಸಿಲ್ಲ. ಅವರಿಗೆ ನೋಟಿಸ್ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ಗಂಭೀರವಾಗಿ ಕ್ರಮಕೈಗೊಳ್ಳಲು ಮುಂದಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನವರು ಸಾಲ ಪಡೆದಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳು ಡಿಫಾಲ್ಟ್ ಇವೆ. ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ, ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆ, ಸವರಿನ್ ಇಂಡಸ್ಟ್ರೀಸ್ ಸಾಲ ಕಟ್ಟಲು ವಿಫಲವಾಗಿವೆ. ಈ ನಾಲ್ಕು ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಗರಣ ಆರೋಪ ಮಾಡುತ್ತ ಉಡಾಫೆ ಮಾತುಗಳನ್ನು ಹೇಳುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಹಾಸಿಗೆ ದಿಂಬುಗಳ ಹಗರಣ ಆಗಿಲ್ಲವೇ? ಅವೆಲ್ಲ ಹೇಗೆ ಮುಚ್ಚಿಹಾಕಿದ್ದಾರೆ ಎಂದು ನಮಗೆ ಎಲ್ಲವೂ ಗೊತ್ತು ಎಂದು ಕಿಡಿಕಾರಿದರು.
ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುವುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಶಾಸಕರಿಗೆ ಯಾವ ಸ್ಥಾನ ಸಿಕ್ಕಿಲ್ಲ ಎಂಬುದು ಕೇಂದ್ರದ ವರಿಷ್ಠರಿಗೆ ಗೊತ್ತಿದೆ ಎಂದರು.