ನಿಧಾನಗತಿ ಕೆಲಸ: ಸಿಇಒಗಳಿಗೆ ಬಿಸಿಮುಟ್ಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಬೇಕಾದ ಕೆಲಸವನ್ನು ವರ್ಷಪೂರ್ತಿ ಮಾಡಲಾಗುತ್ತಿದೆ. ಜನರಿಗೆ ವಿಶ್ವಾಸ ಬರುವಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು(ಮೇ 09) ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಲಕ್ಷತನವನ್ನು ಸಹಿಸುವುದಿಲ್ಲ. ಇವತ್ತಿನಿಂದ ನಿಮ್ಮ ಕೆಲಸಗಳಲ್ಲಿ ಮಾಡುವ ರೀತಿ ಬದಲಾವಣೆಯಾಗಬೇಕು. ನಿಮ್ಮ ನಿಮ್ಮ ಜಿಲ್ಲೆಯಲ್ಲಿ ನೀವೇ ಮುಖ್ಯ ಕಾರ್ಯದರ್ಶಿಗಳಿದ್ದ ಹಾಗೆ, ಆದರೂ ನೀವು ಸರಿಯಾದ  ಕ್ರಮವಹಿಸಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಇಒಗಳನ್ನು ಪ್ರಶ್ನಿಸಿದರು.

ಬಡವರ ಹೊಟ್ಟೆ ಸೂಕ್ಷ್ಮತೆ ಇಟ್ಟುಕೊಂಡು ಕೆಲಸ ಮಾಡಬೇಕು. ಎಷ್ಟು ಜನ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಹೇಗೆ ಸಾಧಿಸಿದ್ದೀರಿ? ಸಿಇಒಗಳು ಗ್ರಾಮ ಪಂಚಾಯ್ತಿಗೆ ಹೋಗುವುದಿಲ್ಲ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಿಮಗೆ ಹೆದರುವುದಿಲ್ಲ, ಅವರು ಸರಿಯಾಗಿ ಕಾರ್ಯನಿರ್ವಹಿಸಲ್ಲ ಹೀಗಾದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು ಮುಂದೆ ಗಂಭೀರವಾಗಿ ನಿಗಾವಹಿಸಿ ಕಾರ್ಯನಿರ್ವಹಿಸಬೇಕು. ಅಧಿಕಾರದ ವಿಕೇಂದ್ರೀಕರಣ ಸರಿಯಾಗಿ  ಆಗುವಂತೆ ನೋಡಿಕೊಳ್ಳಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ನಿಮ್ಮ ನಿಯಂತ್ರಣವಿರಬೇಕು. ಪಿಡಿಒಗಳಿಗೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಿ ಹದ್ದುಬಸ್ತಿನಲ್ಲಿಡಬೇಕು ಎಂದರು.

ನಾವು ಅತ್ಯಂತ ಯೋಜನಾ ಬದ್ಧ ಹಾಗೂ ವೈಜ್ಞಾನಿಕ ದಾರಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದೇವೆ. ಬೇರೆಯವರ ರೀತಿ ನನ್ನ ಆಡಳಿತ ಉದಾಸೀನ ಮಾಡಬೇಡಿ ಎಂದರು.

ಶಾಲೆಗಳು ಆರಂಭವಾಗುತ್ತಿವೆ. ಈಗಾಗಲೇ ಎಷ್ಟು ಮಕ್ಕಳು ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಕಾರ್ಯದಲ್ಲಿ ಎಷ್ಟು ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಯೋಜನೆ ಎಷ್ಟು ಪ್ರಗತಿಯಾಗಿದೆ. ಒಂದು ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಮಕ್ಕಳಿರಬಹುದು. ಮಕ್ಕಳಿಗೆ ಮುಂದೆ ಏನಾದರೂ ತೊಂದರೆಯಾದರೆ ಯಾರು ಅದಕ್ಕೆಲ್ಲಾ ಜವಾಬ್ದಾರಿ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೆ ತರುವುದು ನಿಮ್ಮ ಜವಾಬ್ದಾರಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಕ್ಕಳ ಅಪೌಷ್ಟಿಕತೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಶು ಮತ್ತು ತಾಯಿ ಮರಣ ಕ್ರಮ ತಗ್ಗಿದೆಯೇ? ಅಪೌಷ್ಟಿಕತೆ ಯಾಕೆ ನಿವಾರಣೆಯಾಗಿಲ್ಲ. ಕಳೆದ 30 ವರ್ಷಗಳಿಂದ ಯೋಜನೆ ಜಾರಿಯಲ್ಲಿದ್ದರೂ ಅಪೌಷ್ಟಿಕತೆ ಸಮಸ್ಯೆ ಏಕೆ ಬಗೆಹರಿದಿಲ್ಲ ಎಂದು ಸಿಇಒಗಳ ಮೇಲೆ ಗರಂ ಆದರು.

ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಸಿ.ಸಿ.ಪಾಟೀಲ್, ಸುನೀಲ್ಕುಮಾರ್, ಮುನಿರತ್ನ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಕಾರಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *