ಹಾಸನ: ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಟ್ರಕ್ ಟರ್ಮಿನಲ್ ನಿರ್ಮಾಣ ವಿವಾದ ತಾರಕಕ್ಕೇರಿತ್ತು. ಇದು ಸರ್ಕಾರಿ ಗೋಮಾಳ ಜಾಗವಾಗಿ ಉಳಿಯಲಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕಾಲೇಜಿನ ಮುಂಭಾಗ ಹಾಗೂ ಮಹಿಳಾ ಹಾಸ್ಟೆಲ್ ಪಕ್ಕದಲ್ಲಿದ್ದು, ಇಂತಹ ಜಾಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬಾರದು ಎಂದು ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ಯಪಡಿಸಿದ್ದರು.
ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಎದುರು ಮೂರು ಎಕರೆ, 24 ಗುಂಟೆ ಜಾಗದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಟ್ರಕ್ ಟರ್ಮಿನಲ್ ನಿರ್ಮಾಣದ ವಿಚಾರವು ಈಗಾಗಲೇ ಶಾಸಕರಾದ ಪ್ರೀತಂಗೌಡ ಹಾಗೂ ಹೆಚ್.ಡಿ.ರೇವಣ್ಣ ನಡುವೆ ಪ್ರತಿಷ್ಠೆಯ ಸಮರವಾಗಿದೆ.
ಇದು ತೀವ್ರ ಸ್ವರೂಪ ಪಡೆದು ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ಬಲ್ ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದ್ದರು. ಇನ್ನೊಂದೆಡೆ ಶಾಸಕ ಪ್ರೀತಂಗೌಡ ಬೆಂಬಲಿಗರು ಮುಂದೆ ನಿಂತು ಕಾಮಗಾರಿ ಆರಂಭಿಸಿದ್ದು, ಇದು ವಿಕೋಪಕ್ಕೆ ತಿರುತ್ತಿದ್ದಂತೆ 144 ಸೆಕ್ಷನ್ ಜಾರಿ ಮಾಡಲಾಗಿತ್ತು.
ಇದೀಗ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ದ್ವಿಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಹೈಕೋರ್ಟ್ನಲ್ಲಿ ನಮಗೆ ನ್ಯಾಯ ದೊರಕಲಿದೆ ಎಂದು ಗ್ರಾಮಸ್ಥರು ವಿಶ್ವಾಸವ್ಯಕ್ಯಪಡಿಸಿದ್ದಾರೆ.
ಇದರ ಮಧ್ಯೆ ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶದಂತೆ ಸದರಿ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಕವಿತರಾಣಿ ಕಳೆದ ಮಂಗಳವಾರ ಆದೇಶ ಹೊರಡಿಸಿದ್ದರು.
ಒಟ್ಟಿನಲ್ಲಿ ಟ್ರಕ್ ಟರ್ಮಿನಲ್ ವಿವಾದ ಶಾಸಕರುಗಳಾದ ಎಚ್.ಡಿ.ರೇವಣ್ಣ ಹಾಗೂ ಪ್ರೀತಂಗೌಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇದೀಗ ಈ ವಿವಾದ ಹೈಕೋರ್ಟ್ ಅಂಗಳದಲ್ಲಿದ್ದು, ತೀರ್ಪು ಯಾರ ಪರ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.