ಚೆನ್ನೈ: ಕಾಲಿವುಡ್ನ ಖ್ಯಾತ ನಟ ಸೂರ್ಯ ಅಭಿನಯಿಸಿರುವ ‘ಜೈ ಭೀಮ್’ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದರ ನಡುವೆ ಈ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ಕೆಲವರು ಜೈ ಭೀಮ್ ಚಿತ್ರದ ಬಗ್ಗೆ ಆಕ್ಷೇಪ ಎತ್ತಿದ್ದರು.
ಜೈ ಭೀಮ್ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪದಡಿ ನಟ ಸೂರ್ಯ ಮತ್ತು ಪತ್ನಿ ಜ್ಯೋತಿಕಾ, ನಿರ್ದೇಶಕ ಟಿ ಜೆ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚೆನ್ನೈನ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.
ರುದ್ರ ವನ್ನಿಯಾರ್ ಸೇನೆ ಎಂಬ ವನ್ನಿಯಾರ್ ಗುಂಪು ಅರ್ಜಿ ಸಲ್ಲಿಸಿದ್ದು, ಸಿನಿಮಾದಲ್ಲಿ ಸಮುದಾಯದ ಜನರನ್ನು ಅತ್ಯಂತ ಕೀಲುಮಟ್ಟದಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 29 ರಂದು ಚೆನ್ನೈ ಸೈದಾಪೇಟ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದೆ. ವರದಿಗಳ ಪ್ರಕಾರ, ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯವು ಸೂರ್ಯ, ಜ್ಯೋತಿಕಾ ಮತ್ತು ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಗಿದೆ.
ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ‘ಜೈ ಭೀಮ್’ ತಂಡ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ, ರಾಜಕೀಯ ಸಂಘಟನೆ ಪಟ್ಟಾಲಿ ಮಕ್ಕಳ್ ಕಚ್ಚಿ ವನ್ನಿಯಾರ್ ಸಮುದಾಯಕ್ಕೆ ಅವಮಾನಿಸಲಾಗಿದೆ ಎಂಬ ಆರೋಪದ ಮೇಲೆ 5 ಕೋಟಿ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿ ಸೂರ್ಯ ಅವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದರು.
ಬುಡಕಟ್ಟು ಸಮುದಾಯದ ಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ. ಆದರೆ, ಚಿತ್ರದಲ್ಲಿ ಸಂಘರ್ಷದ ಮುಖ್ಯ ಮೂಲವು ಉರಿಯುತ್ತಿರುವ ಬೆಂಕಿ ಚಿಹ್ನೆಯೊಂದಿಗೆ ಕ್ಯಾಲೆಂಡರ್ ಅನ್ನು ತೋರಿಸುವ ದೃಶ್ಯದಿಂದ ಉಂಟಾಗುತ್ತದೆ. ಈ ಚಿಹ್ನೆಯು ವನ್ನಿಯಾರ್ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಈ ದೃಶ್ಯವು ಮುಖ್ಯ ಖಳನಾಯಕ, ಭ್ರಷ್ಟ ಪೋಲೀಸ್ ತಮ್ಮ ಸಮುದಾಯಕ್ಕೆ ಸೇರಿದವರು ಎಂದು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
ನೀವು ಹೇಳಿದ ದುಷ್ಟರನ್ನು, ತಪ್ಪು ಮಾಡಿದವರನ್ನು ವನ್ನಿಯಾರ್ ಸಮುದಾಯಕ್ಕೆ ಸೇರಿದವರಂತೆ ಬಿಂಬಿಸಿದ್ದೀರಿ, ಆ ಮೂಲಕ ವನ್ನಿಯಾರ್ ಸಮುದಾಯದವರು ತಪ್ಪು ಮತ್ತು ಕಾನೂನುಬಾಹಿರ ಕೆಲಸಗಳಿಗೆ ಗುರಿಯಾಗುತ್ತಾರೆ ಎಂದು ಆರೋಪಿಸಿದ್ದೀರಿ. ಸಬ್ ಇನ್ಸ್ ಪೆಕ್ಟರ್ ವನ್ನಿಯಾರ್ ಗೆ ಸೇರಿದವರಲ್ಲ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.