ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ(ಐಎನ್‌ಟಿಯುಸಿ)ದ ಅಧ್ಯಕ್ಷ ಎಸ್.ಎಸ್. ಪ್ರಕಾಶಂ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಶುಕ್ರವಾರ (ಏಪ್ರಿಲ್ 29) ಮಧ್ಯರಾತ್ರಿ ಅವರಿಗೆ ಹೃದಯಾಘಾತವಾಗಿತ್ತು.
ಎಸ್.ಎಸ್. ಪ್ರಕಾಶಂ ಅವರು ಪತ್ನಿ ಹಾಗೂ ಓರ್ವ ಪುತ್ರನ ಸಹಿತ ಅಪಾರ ಸಂಖ್ಯೆಯ ಬಂಧು-ಮಿತ್ರರು ಮತ್ತು ಒಡನಾಡಿಗಳನ್ನು ಅಲಿದ್ದಾರೆ. ಅವರು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಿಂದ ಐಎನ್‌ಟಿಯುಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕರ್ನಾಟಕ ರಾಜ್ಯ ಮಾಂಸ ಮತ್ತು ಕೋಳಿ ಮಂಡಳಿಯ ಅಧ್ಯಕ್ಷರಾಗಿ ಮತ್ತು ಕರ್ನಾಟಕ ರಾಜ್ಯ ಟ್ರಕ್ ಮತ್ತು ಟರ್ಮಿನಲ್ ಕಾರ್ಪೊರೇಷನ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಎಸ್.ಎಸ್. ಪ್ರಕಾಶಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ‘ಪ್ರಕಾಶಂ ಅವರು ಪಕ್ಷದ ನಿಷ್ಠವಂತ ನಾಯಕ ಹಾಗೂ ಕಾರ್ಯಕರ್ತರಾಗಿದ್ದು, ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಕಾರ್ಮಿಕರ ಪರ ಕಾಳಜಿ ಹೊಂದಿದ್ದ ಪ್ರಕಾಶಂ ಅವರು ಉತ್ತಮ ಸಂಘಟಕರರೂ ಹೌದು. ಅವರ ನಿಧನದಿಂದ ಪಕ್ಷಕ್ಕೆ ನಷ್ಟವಾಗಿದೆ ಎಂದಿದ್ದಾರೆ.