ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಈ ಹಿಂದೆ ನಡೆದಿದ್ದ ಪಿಎಸ್ಐ ಪರೀಕ್ಷೆ ಫಲಿತಾಂಶವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.
2021ರ ಆಗಸ್ಟ್ 3ರಂದು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದು ಸಿಐಡಿ ತನಿಖೆಯ ಹಂತದಲ್ಲಿದ್ದು, ಈಗಾಗಲೇ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಇದನ್ನು ಓದಿ: ಪಿಎಸ್ಐ ಪರೀಕ್ಷಾ ಅಕ್ರಮ : ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ
ಕಳೆದ ಬಾರಿ ನಡೆಸಲಾದ ಪಿಎಸ್ಐ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಆರಗ ಜ್ಞಾನೇಂದ್ರ, ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ಹೇಳಿದರು.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಸೇರಿದಂತೆ ರಾಜ್ಯದ ವಿವಿದೆಡೆಯೂ ಅಕ್ರಮಗಳು ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಕೇಂದ್ರದಲ್ಲೂ ಅಕ್ರಮದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ನಿರ್ಧರಿಸಲಾಗಿದೆ. ಆರೋಪಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಸಿಗುವುದಿಲ್ಲ.
ಆರೋಪಿಗಳಿಗೆ ಮರು ಪರೀಕ್ಷೆಗೆ ಅವಕಾಶವಿಲ್ಲ:
545 ಪಿಎಸ್ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಕಳೆದ ಬಾರಿ ಪರೀಕ್ಷೆ ವೇಳೆ ಅಕ್ರಮ ನಡೆಸಿದ್ದ ಆರೋಪಿಗಳಿಗೆ ಮರು ಪರೀಕ್ಷೆಯಿಲ್ಲ. ಅವರು ಮರು ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಸರ್ಕಾರದ ಪರೀಕ್ಷೆಗಳಲ್ಲಿ ಅವ್ಯವಹಾರ ತಡೆಗಟ್ಟಲು ಕಠಿಣ ಕಾಯ್ದೆ ರೂಪಿಸಲು ಮುಂದಾಗಿದ್ದೇವೆ. ಎಂದು ಗೃಹ ಸಚಿವರು ತಿಳಿಸಿದರು.
ಇದನ್ನು ಓದಿ: ದ್ವೇಷವನ್ನು ಕಣ್ಣಿಗೆ ಮೆತ್ತಿಕೊಂಡ ಸರ್ಕಾರ-ವೈಫಲ್ಯ ಮರೆಮಾಚಲು ಬೊಮ್ಮಾಯಿ ಹರಸಾಹಸ
ಡಿಜಿ ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಸಭೆ ನಡೆಸುತ್ತಿದ್ದಾರೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ 2021ರ ಆಗಸ್ಟ್ 3ರಂದು ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. 2022ರ ಜನವರಿ 19ರಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ ಮಾಡಲಾಗಿತ್ತು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದೂರು ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿತ್ತು. ಅಕ್ರಮ ಕುರಿತಂತೆ ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಪ್ರಮುಖ ಆರೋಪಿ ಬಿಜೆಪಿ ಪಕ್ಷದ ಮುಖಂಡೆ ದಿವ್ಯಾ ಹಾಗರಗಿ ಬಂಧನವಾಗಿದೆ.