ಎಲ್‍.ಐ.ಸಿ.ಯ  ಐಪಿಒವನ್ನು ತಕ್ಷಣವೇ ನಿಲ್ಲಿಸಬೇಕು – ಸಿಪಿಐ(ಎಂ) ಪೊಲಿಟ್‍ ಬ್ಯುರೊ

“ಈ ಪ್ರಕ್ರಿಯೆಯಲ್ಲಿ ಒಟ್ಟಾರೆ ಅನುಚಿತತೆ ಮತ್ತು ದುರ್ನಡತೆಯ ವಾಸನೆ ಬರುತ್ತಿದೆ”

ಎಲ್‌ಐಸಿ ಆರಂಭಿಕ ಶೇರು ಮಾರಾಟ(ಐಪಿಒ) ಮೇ 4ರಂದು ಆರಂಭವಾಗಲಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸುತ್ತಾ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಸರಕಾರ ಈ ಪ್ರಕ್ರಿಯೆಯನ್ನು ಎಲ್‍.ಐ.ಸಿ.ಯ ನೈಜ ಮೌಲ್ಯವನ್ನು ಕಡಿಮೆ ಮಾಡುವ ಮತ್ತು ಪಾಲಿಸಿದಾರರ ಹಿತಾಸಕ್ತಿಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ಆಕ್ರಾಮಕವಾಗಿ ನಡಸುತ್ತಿರುವುದು ಆಕ್ರೋಶಕಾರಿ ಎಂದು ಹೇಳಿದೆ. ಇದರಲ್ಲಿ ಒಟ್ಟಾರೆ ಅನುಚಿತತೆ ಮತ್ತು ಹಣಕಾಸು ದುರ್ನಡತೆಯ ವಾಸನೆ ಬರುತ್ತಿದೆ. ಆದ್ದರಿಂದ, ಈ ಐಪಿಒ ವನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ವಿರೋಧಿಸಬೇಕು ಎಂದು ಆಗ್ರಹಿಸಿರುವ ಪೊಲಿಟ್ ಬ್ಯುರೋ , ಈ ನಿಟ್ಟಿನಲ್ಲಿ ಎಲ್‍.ಐ.ಸಿ. ಯ ನೌಕರರು ಮತ್ತು ಪಾಲಿಸಿದಾರರ ನಿರಂತರ ಹೋರಾಟಕ್ಕೆ ಸೌಹಾರ್ದವನ್ನು ವ್ಯಕ್ತಪಡಿಸುತ್ತ, ಸರ್ಕಾರವು ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದೆ.

ಎಲ್‍ಐಸಿಯ ಐಪಿಒವನ್ನು ಆರಂಭಿಸುವಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುವ ರೀತಿಯನ್ನು ದೃಢವಾಗಿ ವಿರೋಧಿಸುತ್ತ ಸಿಪಿಐ(ಎಂ) ಪೊಲಿಟ್ ಬ್ಯೂರೋ, ಇದು ಎಲ್‌ಐಸಿಯ ಸಾರ್ವಜನಿಕ ಸ್ವರೂಪವನ್ನು ನಾಶಪಡಿಸುವ ಮತ್ತು ಎಲ್‌ಐಸಿಯ ಸುಮಾರು 29 ಕೋಟಿ ಪಾಲಿಸಿದಾರರ ಒಡೆತನದ ಬೆಲೆಬಾಳುವ ಹಣಕಾಸು ಆಸ್ತಿಗಳನ್ನು ಹಸ್ತಾಂತರಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ವರ್ಣಿಸಿದೆ.

ಇದನ್ನು ಓದಿ: ಎಲ್‌ಐಸಿಯನ್ನು ಬುಡಮೇಲು ಮಾಡುವ ಹಾನಿಕಾರಕ ಹೆಜ್ಜೆ

ವಿಮಾ ಜಗತ್ತಿನಲ್ಲಿ ಎಲ್ಐಸಿಗೆ ಅನನ್ಯ ಸ್ಥಾನವಿದೆ. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಸಲುವಾಗಿ ಖಾಸಗಿ ವಿಮಾ ಕಂಪನಿಗಳ ರಾಷ್ಟ್ರೀಕರಣದ ಮೂಲಕ ಇದನ್ನು ರಚಿಸಲಾಗಿದೆ. ಉಳಿತಾಯ ಮತ್ತು ಆಪತ್ತಿನಿಂದ ರಕ್ಷಣೆಯನ್ನು ಮೇಳವಿಸಿದ ಒಂದು ನವೀನ ಸಮ್ಮಿಶ್ರ  ಉತ್ಪನ್ನವನ್ನು ಪ್ರಸ್ತುತಪಡಿಸಲಾಯಿತು. ಇದು ಸಾಮಾನ್ಯ ಜನರಲ್ಲಿ ಜನಪ್ರಿಯವಾಗಿ ವಿಮಾ ವ್ಯವಹಾರ ತ್ವರಿತವಾಗಿ ವಿಸ್ತರಣೆಗೊಳ್ಳುವಂತಾಯಿತು. ಭಾರತ ಸರಕಾರ ಕೇವಲ 5 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತ್ತು, ಆದರೆ ಇಂದು ಒಟ್ಟು ಜೀವ ನಿಧಿಯು(ಲೈಫ್‍ ಫಂಡ್) 34 ಲಕ್ಷ ಕೋಟಿ ರೂಪಾಯಿಯಾಗಿದೆ.

ಈಗ ಸರ್ಕಾರ ಪಾಲಿಸಿದಾರರ ಟ್ರಸ್ಟ್‌ನ ಸ್ವರೂಪ ಹೊಂದಿರುವ ಈ ಹಣಕಾಸು ಸಂಸ್ಥೆಯನ್ನು ಲಾಭವನ್ನು ಗರಿಷ್ಟಗೊಳಿಸುವ ಷೇರುದಾರರ ಒಡೆತನದ ಕಂಪನಿಯಾಗಿ ಬದಲಾಯಿಸಬೇಕೆಂದಿದೆ. ಎಲ್ಐಸಿಯ ಷೇರುಗಳ ಮಾರಾಟವೆಂದರೆ, ನಿಜಾರ್ಥದಲ್ಲಿ ಪಾಲಿಸಿದಾರರ ಭವಿಷ್ಯದ ಆದಾಯದ ಹರಿವಿನ ಮಾರಾಟವೇ ಆಗಿದೆ. ಆದರೆ ಅವರೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ, ಮತ್ತು ಐಪಿಒದ ಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿಯೂ ಇಲ್ಲ ಎಂಬ ಸಂಗತಿಯತ್ತ ಪೊಲಿಟ್‍ ಬ್ಯುರೊ ಗಮನ ಸೆಳೆದಿದೆ.

ಇದನ್ನು ಓದಿ: ಎಲ್‌ಐಸಿ ಶೇರು ಮಾರಾಟ ಆರಂಭದ ವಿರುದ್ಧ ಐಕ್ಯ ಪ್ರತಿಭಟನೆ ತೀವ್ರಗೊಳಿಸಲು ನೌಕರರ ನಿರ್ಧಾರ

ಈ ಅಸಹ್ಯಕರ ಪ್ರಕ್ರಿಯೆಯ ವಿವರಗಳು ಈಗ ಅನಾವರಣಗೊಳ್ಳುತ್ತಿವೆ. ಎಲ್‌ಐಸಿಯ ಹುದುಗಿರುವ ಮೌಲ್ಯದ (ಎಂಬೆಡ್ಡೆಡ್ ವ್ಯಾಲ್ಯು-ಇವಿ) ಇತ್ತೀಚಿನ ಅಂದಾಜು 5.40 ಲಕ್ಷ ಕೋಟಿ ರೂ. ಎನ್ನಲಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ, ಪ್ರತಿ ಎಲ್ಐಸಿ ಷೇರಿನ ನೈಜ ಮೌಲ್ಯವನ್ನು 2.5 ಮತ್ತು 3 ರ ನಡುವಿನ ಗುಣಕಾಂಶವನ್ನುಅನ್ವಯಿಸುವ ಮೂಲಕ ನಿರ್ಧರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಅಂತರಾಷ್ಟ್ರೀಯ ಹೂಡಿಕೆದಾರರ ಪುಸಲಾವಣೆಗೆ ತಲೆಬಾಗಿ ಸರ್ಕಾರವು 1.1 ಗುಣಕಾಂಶವನ್ನು ಬಳಸಿ ಮೌಲ್ಯಮಾಪನವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.

ವಿಮಾ ವಲಯದ ಮೇಲಿನ ನಿಯಂತ್ರಣಗಳನ್ನು ತೆಗೆದು ಕಾಲು ಶತಮಾನವಾಗಿದ್ದರೂ, ಎಲ್ಐಸಿ ಈಗಲೂ ದೇಶದಲ್ಲಿ 73% ಪಾಲಿಸಿಗಳನ್ನು ಮತ್ತು 61% ದಷ್ಟು ಮೊದಲ ವರ್ಷದ ಪ್ರೀಮಿಯಂ ಪಾಲನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಮೌಲ್ಯಯುತ ವಿಮಾ ಬ್ರಾಂಡ್‍ಗಳಲ್ಲಿ ಒಂದಾಗಿದೆ. ಇದರ ಆಸ್ತಿ ಒಟ್ಟು ರೂ 38 ಲಕ್ಷ ಕೋಟಿ ಮತ್ತು ಇದು ದೇಶಾದ್ಯಂತ ಹರಡಿರುವ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 14 ಲಕ್ಷ ಏಜೆಂಟರನ್ನು ಹೊಂದಿದೆ ಭಾರತದಲ್ಲಿ ಜೀವ ವಿಮೆಯ ಹರಿಕಾರನಾಗಿದ್ದು, ಸುಮಾರು ಮೂರನೇ ಎರಡರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಮತ್ತು ಆರು ದಶಕಗಳ ಕಳಂಕರಹಿತ ದಾಖಲೆಯನ್ನು ಹೊಂದಿರುವ ಒಂದು ಕಂಪನಿಯ ಮೌಲ್ಯವನ್ನು ಕೋಟ್ಯಂತರ ಪಾಲಿಸಿದಾರರ ಹಿತವನ್ನು ಬಲಿಗೊಟ್ಟು. ಆದಷ್ಟು ಬೇಗನೇ ಹಣಮಾಡಿಕೊಳ್ಳುವ ಧಾವಂತದಲ್ಲಿರುವ ಚಪಲ ಅಂತರರಾಷ್ಟ್ರೀಯ ಹೂಡಿಕೆದಾರರು ಅಳೆಯಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನು ಓದಿ: ಮೇ 4ಕ್ಕೆ ಎಲ್ಐಸಿ ಐಪಿಒ ಲೋಕಾರ್ಪಣೆ ಸಾಧ್ಯತೆ: ಕೇಂದ್ರ ಹಣಕಾಸು ಸಚಿವಾಲಯ

ಇದರಲ್ಲಿ ಒಟ್ಟಾರೆ ಅನುಚಿತತೆ ಮತ್ತು ಹಣಕಾಸು ದುರ್ನಡತೆಯ ವಾಸನೆ ಬರುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯೂರೋ, ತಾನು ತಾತ್ವಿಕವಾಗಿ, ಕೋಟ್ಯಂತರ ಪಾಲಿಸಿದಾರರ ಆಸ್ತಿಯನ್ನು ಹೊಂದಿರುವ ಸಂಸ್ಥೆಯ ಐಪಿಒವನ್ನು ವಿರೋಧಿಸುವುದೇ ಅಲ್ಲದೆ, ವಿಶೇಷವಾಗಿ ಎಲ್‍ಐಸಿಯ ನೈಜ ಮೌಲ್ಯವನ್ನು ಕಡಿಮೆ ಮಾಡುವ ಮತ್ತು ಪಾಲಿಸಿದಾರರ ಹಿತಾಸಕ್ತಿಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ಸರ್ಕಾರವು ಆಕ್ರಾಮಕವಾಗಿ ನಡೆದುಕೊಳ್ಳುತ್ತಿರುವುದು ಆಕ್ರೋಶಕಾರಿ ಎಂದಿದೆ. ಆದ್ದರಿಂದ, ಈ ಐಪಿಒವನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ವಿರೋಧಿಸಬೇಕು ಎಂದು ಅದು ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಎಲ್‍.ಐ.ಸಿ. ಯ ನೌಕರರು ಮತ್ತು ಪಾಲಿಸಿದಾರರ ನಿರಂತರ ಹೋರಾಟಕ್ಕೆ ಸೌಹಾರ್ದವನ್ನು ವ್ಯಕ್ತಪಡಿಸುತ್ತ, ಸರ್ಕಾರವು ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಅದು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *