- ಅಕ್ರಮದ ಪ್ರಮುಖ ಆರೋಪಿ ದಿವ್ಯ ಇನ್ನೂ ನಾಪತ್ತೆ..!
- ಜ್ಞಾನ ಜ್ಯೋತಿ ಶಾಲೆಯೇ ಪಿಎಸ್ಐ ನೇಮಕಾತಿ ಅಕ್ರಮದ ಕೇಂದ್ರ ಬಿಂದು..?
- ನೇಮಕಾತಿಯಲ್ಲಿ ಕಲಬುರಗಿ ಜಿಲ್ಲೆಗೆ ಸಿಂಹಪಾಲು
ಕಲಬುರಗಿ : ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿ ಆಡಳಿತರೂಢ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಸಿಐಡಿ ತನಿಖೆಯು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ಜೊತೆಯಲ್ಲೆ ಆಘಾತಕಾರಿ ಅಂಶಗಳು ಹೊರ ಬೀಳುತ್ತಿವೆ.
ಸರ್ಕಾರ ಒಟ್ಟು 545 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ರಾಜ್ಯಾದ್ಯಂತ ಒಟ್ಟು 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಒಟ್ಟು 92 ಜನ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದು, ನೇಮಕಾತಿಯಲ್ಲಿ ಸಿಂಹಪಾಲು ಕಲಬುರಗಿ ಸಿಕ್ಕಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಕಲಬುರಗಿ ನಗರದಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮಾಡಲಾಗಿತ್ತು. ಈ ಪೈಕಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರವೊಂದರಿಂದಲೇ 11 ಅಭ್ಯರ್ಥಿಗಳು ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ. ಈ 11 ರಲ್ಲಿ ಏಳು ಜನ ಅಕ್ರಮವಾಗಿ ಆಯ್ಕೆಯಾಗಿ ಇದೀಗ ಸಿಐಡಿ ಕೈಗೆ ಲಾಕ್ ಆಗಿದ್ದಾರೆ.
ಇನ್ನೂ ಅಕ್ರಮದಲ್ಲಿ ಭಾಗಿಯಾದ ನಾಲ್ಕು ಜನರಿಗಾಗಿ ಸಿಐಡಿ ಶೋಧ ಕಾರ್ಯ ನಡೆಸುತ್ತಿದೆ. ನಾಲ್ಕು ಜನರಲ್ಲಿ ಓರ್ವ ಮಹಿಳಾ ಅಭ್ಯರ್ಥಿಯಿಂದಲು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಆ ಮಹಿಳಾ ಅಭ್ಯರ್ಥಿ ಹೆಸರು ಶಾಂತಾಬಾಯಿ. ಇದೀಗ ಆ ಮಹಿಳೆಗಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಶಾಂತಾಬಾಯಿ ನಾಪತ್ತೆಯಾಗಿದ್ದಾರೆ. ಕಲಬುರಗಿ ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಆದ್ರೆ ಅಕ್ರಮದ ಕೇಂದ್ರ ಬಿಂದುವಾಗಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿ ದಿವ್ಯಾ ಹಾಗರಗಿ, ಮುಖ್ಯ ಶಿಕ್ಷಕ ಕಾಶಿನಾಥ್, ನೀರಾವರಿ ಇಲಾಖೆಯ ಅಸಿಸ್ಟೆಂಟ್ ಇಂಜನಿಯರ್ ಮಂಜುನಾಥ್ ಮೇಳಕುಂದಿ ಸೇರಿ ಆರು ಜನ ಇನ್ನೂ ಸಿಕ್ಕಿಲ್ಲ.