ಚಳುವಳಿ ಜೊತೆಗೆ ಸಹಕಾರಿ ಕೃಷಿ ಮಾತ್ರವೇ ರೈತರನ್ನು ಉಳಿಸಲು ಸಾಧ್ಯ – ಕೃಷ್ಣಪ್ರಸಾದ್

ಚಿಕ್ಕಬಳ್ಳಾಪುರ :  ದೇಶದ ಕೃಷಿ ಅತ್ಯಂತ ಬಿಕ್ಕಟಿನಲ್ಲಿದ್ದು ಕೃಷಿ ಕ್ಷೇತ್ರವನ್ನು ಉಳಿಸಿ ಆಮೂಲಕ ರೈತರನ್ನು ರಕ್ಷಿಸಬೇಕಾದರೆ ಪ್ರಭಲ ರೈತ ಚಳುವಳಿಯ ಜೊತೆಗೆ ಪರ್ಯಾಯ ಸಹಕಾರಿ ಕೃಷಿಯನ್ನು ಬಲಪಡಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರ ಮುಖಂಡರಾದ ಕೃಷ್ಣಪ್ರಸಾದ್ ಹೇಳಿದರು.

ಲೀಟರ್ ಹಾಲಿಗೆ ಕನಿಷ್ಟ 50 ರೂ ಗಾಗಿ, ಹೈನುಗಾರಿಕೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಂದ ರಕ್ಷಿಸಲು, ‘ಸಹಕಾರಿ‌ ಕ್ಷೇತ್ರ’ವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಆಗ್ರಹಿಸಿ ಚಿಕ್ಕಬಳ್ಳಾಪುರದ‌ ಅಂಬೇಡ್ಕರ್ ಭವನದಲ್ಲಿ ನಡೆದ ಹಾಲು ಉತ್ಪಾದಕರ ರಾಜ್ಯಮಟ್ಟದ ಸಮಾವೇಶವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದ ಕೃಷ್ಣಪ್ರಸಾದ್ ರವರು ದೇಶಾದ್ಯಂತ ಸಣ್ಣ ಮತ್ತು ಮಧ್ಯಮ ರೈತರು ದೊಡ್ಡ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಈ ಹೈನುಗಾರಿಕೆಯಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಕನಿಷ್ಟ 35 ರೂ ವೆಚ್ಚವಾಗುತ್ತಿದ್ದು ರೈತರು ಪ್ರೋತ್ಸಾಹ ಧನವನ್ನೂ ಸೇರಿ ಲೀಟರ್ ಗೆ ಕೇವಲ 30 ರೂ ಪಡೆಯುತ್ತಿದ್ದು, ಪ್ರತಿ ಲೀಟರ್ ಗೆ 5 ರೂ ನಷ್ಟವಾಗುತ್ತಿದೆ. ಕೃಷಿ ತಜ್ಞ ಎಂ.ಎಸ್ ಸ್ವಾಮಿನಾಥನ್ ರವರ ವರದಿಯ ಶಿಫಾರಸ್ಸಿನಂತೆ ಹಾಲಿನ ಪ್ರತಿ ಲೀಟರ್ ಗೆ ಕನಿಷ್ಟ 50 ರೂ ಬೆಂಬಲ ಬೆಲೆಯನ್ನು ಖಾತ್ರಿಪಡಿಸಬೇಕೆಂದು ಆಗ್ರಹಿಸಿದರು.

ಹೈನುಗಾರಿಕೆಯ ಸಂಕಷ್ಟದ ಪರಿಸ್ಥತಿಯನ್ನು ಬದಲಾಯಿಸಲು RCEP ಯಂತಹ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಬಲಿಷ್ಟವಾದ ರೈತ ಚಳುವಳಿಯನ್ನು ಸಂಘಟಿಸಬೇಕು. ಇದರ ಜೊತೆ ರೈತರ ನೇತೃತ್ವದಲ್ಲಿ ಪರ್ಯಾಯ ಸಹಕಾರಿ ಕೃಷಿಯನ್ನು ಬೆಳೆಸಬೇಕು ಎಂದರು.

ಕೇರಳದಲ್ಲಿ ಡೈರಿ ಸಹಕಾರಿ ಸಂಘಗಳ ಜೊತೆಗೆ, ರೈತರ ಕಲ್ಯಾಣ ಮಂಡಳಿಗಳ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಮಕ್ಕಳ ಮದುವೆಗೆ 5000 ರೂ ಪ್ರೋತ್ಸಾಹ ಧನ, ಶಿಕ್ಷಣ, ಆರೋಗ್ಯಕ್ಕೆ ಸಹಾಯ ಧನವನ್ನು ನೀಡಲಾಗುತ್ತಿದೆ‌‌. ಪ್ರತಿ ರೈತರಿಗೂ ತಿಂಗಳಿಗೆ 1600 ರೂ ಕುಟುಂಬ ಪಿಂಚಣಿ ನೀಡಲಾಗುತ್ತಿದೆ. 550 ರೂ ರೈತ ವಿದವಾ ಪಿಂಚಣಿಯನ್ನು ನೀಡಲಾಗುತ್ತಿದೆ. ಹಾಲು ಉತ್ಪನ್ನಗಳ ಮೌಲ್ಯವರ್ಧನೆಗೆ ಬೇಕಾದ ಗಮನವನ್ನು ನೀಡಬೇಕು. ಇದರ ಮೂಲಕ ಬರುವ ಎಲ್ಲಾ ಲಾಭವನ್ನು ನೇರವಾಗಿ ರೈತರಿಗೆ ವರ್ಗಾಹಿಸಬೇಕು.

ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಂತಹ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದ ಹಾಲು ಉತ್ಪಾದಕ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಕಾಯ್ದೆಯನ್ನು ರಾಜ್ಯ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಸಮಾವೇಶದಲ್ಲಿಕೆಪಿಆರ್‌ಎಸ್‌ನ ನ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು.ಬಸವರಾಜು, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅದ್ಯಕ್ಷರಾದ ಕಾಡೇನಹಳ್ಳಿ ನಾಗರಾಜ್, ನಿರ್ದೇಶಕರುಗಳಾದ ಭರಣಿ ವೆಂಕಟೇಶ್, ಆದಿನಾರಾಯಣ ರೆಡ್ಡಿ, ಕೆಪಿಆರ್‌ಎಸ್‌ನ ಜಲ್ಲಾ ಮುಖಂಡರಾದ ಮಂಜುನಾಥರೆಡ್ಡಿ, ಲಕ್ಷ್ಮೀನಾರಾಯಣ, ಮುನಿಕೃಷ್ಣಪ್ಪ ಭಾಗವಹಿಸಿದ್ದರು, ಸಮಾವೇಶದ ಅಧ್ಯಕ್ಷತೆಯನ್ನ ವೆಂಕಟಾಚಲಯ್ಯ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *