ಬೆಂಗಳೂರು: ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಳ್ಳಾಪುರದ ನಾಗದೇವನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ ಹಾಸ್ಟೆಲ್ ಕ್ಯಾಂಪಸ್‌ನ 6 ನೇ ಮಹಡಿಯಿಂದ ಬಿದ್ದು ಉಗಾಂಡಾದ 24 ವರ್ಷದ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ಹಸೀನಾ ಮೃತಪಟ್ಟಿದ್ದಾರೆ.
ಹಸೀನಾ ಸಾವಿಗೆ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆಯೇ ಕಾರಣವೆಂದು ಕೆರಳಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು. ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಒಡೆದ ಘಟನೆ ಜರುಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಪಕ್ಕದ ಕಟ್ಟಡದ ಮೇಲ್ಛಾವಣಿಯ ಮೇಲೆ ಬಿದ್ದಿದ್ದ ಬಟ್ಟೆಯನ್ನು ಆರಿಸಲು ಪ್ರಯತ್ನಿಸುತ್ತಿದ್ದಾಗ ಆಕೆ ಕಾಲು ಜಾರಿ ಬಿದ್ದಿದ್ದಾಳೆ ಎಂದು ಹೇಳಲಾಗುತ್ತಿದೆ. 6ನೇ ಮಹಡಿಯಿಂದ ಮೊದಲ ಮಹಡಿ ಮೇಲೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ,
ಕಳೆದ ವಾರದಿಂದ ಈ ವಿಶ್ವವಿದ್ಯಾಲಯವು ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿದ್ಯಾರ್ಥಿಗಳ ನಡುವಿನ ಜಗಳದಿಂದ ಸುದ್ದಿಯಲ್ಲಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಆದರೂ ಈ ದುರ್ಘಟನೆ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.