ಶಿವಮೊಗ್ಗ: ಶ್ರೀರಾಮಸೇನೆ, ಭಜರಂಗದಳ, ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು. ಅವರಿಗೆ ಹೊಡೆದರೆ ಎಲ್ಲವೂ ಸರಿಯಾಗುತ್ತದೆ, ಸಮಾಜವು ಸರಿಯಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಇರುವುದು ಯಾರದ್ದು? ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು, 144 ಸೆಕ್ಷನ್ ಹಾಕಿದ್ದು ಯಾರು? ಈಶ್ವರಪ್ಪ ಯಾವ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಉಲ್ಲಂಘನೆ ಮಾಡಿದ್ದು ಯಾರು.? ಶವಯಾತ್ರೆ ಮಾಡಿದ್ದು ಯಾರು? ಹರ್ಷನ ಕುಟುಂಬಕ್ಕೆ 25 ಲಕ್ಷ ಕೊಡಿಸಿದ್ದು ಯಾರು? ನಾನು ಕೂಡ ಹರ್ಷನ ಕೊಲೆ ಖಂಡಿಸಿದ್ದೇನೆ. ಯಾರೇ ಅದರೂ ಕೊಲೆಗಾರರಿಗೆ ಶಿಕ್ಷೆಯಾಗಬೇಕು. ಆದರೆ, ಒಂದು ಕಣ್ಣಿಗೆ ಬೆಣ್ಣೆ. ಇನ್ನೊಂದು ಕಣ್ಣಿಗೆ ಸುಣ್ಣ ಎಂದು ವರ್ತಿಸಬಾರದು ಎಂದು ಪ್ರಶ್ನೆಗಳನ್ನು ಕೇಳಿದರು.
ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಸರ್ಕಾರ ಪರಿಹಾರ ಕೊಟ್ಟಿದೆ. ಅದೇ ಬೆಳ್ತಂಗಡಿಯ ದಿನೇಶ್ ಕೊಲೆಯಾದಾಗ ಕುಟುಂಬಕ್ಕೆ ಎಷ್ಟು ಕೊಟ್ಟರು? ಅವನ ಕೊಲೆ ಮಾಡಿದವರು ಭಜರಂಗದಳದವರು. ನರಗುಂದದಲ್ಲಿ ಕೊಲೆಯಾದ ಮುಸ್ಲಿಮನಿಗೆ ಎಷ್ಟು ಪರಿಹಾರ ಕೊಟ್ಟರು? ನರಗುಂದದಲ್ಲಿ ಕೊಲೆ ಮಾಡಿದವರು ಶ್ರೀ ರಾಮಸೇನೆಯವರು. ಕೊಲೆಯಾದವರಿಗೆ ಒಂದು ಪೈಸೆ ಸಹ ಪರಿಹಾರ ಕೊಡಲಿಲ್ಲ. ಯಾಕೇ ಹೀಗೆ ಎಂದು ಪ್ರಶ್ನಿಸಿದರು.
ನಮ್ಮ ಕಾಲದಲ್ಲಿ ಅಷ್ಟು ಕೊಲೆಯಾಯ್ತು ಎನ್ನುತ್ತಾರೆ. ವಿರೋಧ ಪಕ್ಷದಲ್ಲಿದ್ದ ಅವರು ಕಡ್ಲೇಪುರಿ ತಿನ್ನತ್ತಿದ್ದರಾ? ಅವರ ಕಾಲದಲ್ಲಿ ನಡೀತು, ಇವಾಗ ನಡೀತು ಅಂದರೆ ಏನು ಪ್ರಯೋಜನ. ನಾವು ಪರಿಹಾರ ಕೊಡದಿದ್ದಾಗ ನೀವು ಯಾಕೆ ಕೇಳಲಿಲ್ಲ. ಅಧಿಕೃತ ವಿರೋಧ ಪಕ್ಷದಲ್ಲಿದ್ದು ಏನು ಮಾಡಿದ್ದರಿ, ನಾನೀಗ ವಿರೋಧ ಪಕ್ಷದಲ್ಲಿದ್ದು ಕೇಳುತ್ತಿದ್ದೇನೆ. ಅವರು ತಪ್ಪು ಮುಚ್ಚಿಕೊಳ್ಳೊಕೆ ಹಿಂದಿನ ಸರ್ಕಾರದ ಬಗ್ಗೆ ಮಾತನಾಡ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಚುನಾವಣೆಗೆ ತಯಾರಿ ನಡೆಯುತ್ತಿದೆ. ಯಾವಾಗಲೇ ಚುನಾವಣೆ ನಡೆದರರೂ ನಾವು ಸಿದ್ಧ. ಚುನಾವಣೆಗೆ ಬೇಕಾದಷ್ಟು ವಿಚಾರ ಇದೆ. ಬ್ರಹ್ಮಾಂಡ ಭ್ರಷ್ಟಾಚಾರ ಇದೆಯಲ್ಲಾ ಎಂದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತೇವೆ, ಅಸಮಾಧಾನ ಇಲ್ಲ ಎಂದರು.