ಮೀನು ಸಂಸ್ಕರಣಾ ಘಟಕದಲ್ಲಿ ದುರ್ಮರಣ: ತಲಾ 50 ಲಕ್ಷ ಪರಿಹಾರ-ನಿಷ್ಪಕ್ಷಪಾತ ತನಿಖೆಗೆ ಡಿವೈಎಫ್ಐ ಆಗ್ರಹ

ಮಂಗಳೂರು: ಎಂಎಸ್‌ಇಝಡ್ ನ ಶ್ರೀ ಉಲ್ಕಾ ಮೀನುಗಾರಿಕಾ ಘಟಕದಲ್ಲಿ ನಡೆದ ದುರಂತದಲ್ಲಿ ಬಲಿಯಾದವರ ಮೃತದೇಹಗಳು ಅವರ ಹುಟ್ಟೂರು ತಲುಪಿವೆ. ಕಂಪೆನಿಯು ಮಧ್ಯಂತರ ಪರಿಹಾರವಾಗಿ ತಲಾ 15 ಲಕ್ಷ ರೂಪಾಯಿಗಳನ್ನು ಘೋಷಿಸಿದೆ. ಆದರೆ ಇಷ್ಟು ಮಾತ್ರ ಕ್ರಮಗಳು ಸಾಲುವುದಿಲ್ಲ. ರಾಜ್ಯ ಸರಕಾರ ಹಾಗೂ ಕಂಪೆನಿಗಳು ಸೇರಿ ಬಲಿಯಾದವರ ಪ್ರತಿ ಕುಟುಂಬಗಳಿಗೆ ಕನಿಷ್ಟ 50 ಲಕ್ಷ ರೂಪಾಯಿ ಪರಿಹಾರ ಧನ ಒದಗಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಸಂಘಟನೆಯು ದುರಂತಕ್ಕೆ ಕಾರಣವಾಗಿರುವ ಪ್ರಧಾನ ಆರೋಪಿಯಾಗಿರುವ ಶ್ರೀ ಉಲ್ಕಾ ಕಂಪೆನಿಯ ಮಾಲಕನನ್ನು ತಕ್ಷಣ ಬಂಧಿಸಿ, ಸಮಗ್ರ ತನಿಖೆ ನಡೆಸಬೇಕು ಹಾಗೂ ನಿರ್ಲಕ್ಷ್ಯ ವಹಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆ, ಎಂಎಸ್‌ಇಝಡ್ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.

ದುರಂತ ನಡೆದು 48 ಗಂಟೆ ದಾಟಿದರೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಘಟನೆಯ ಕುರಿತು ಪ್ರತಿಕ್ರಿಯಿಸಿಲ್ಲ, ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವುದಿಲ್ಲ. ಆಡಳಿತ ಪಕ್ಷದ ಶಾಸಕರು, ಸಂಸದರು ಸಹ ಮೃತ ಕುಟುಂಬಸ್ಥರಿಗೆ ಸಾಂತ್ವನ ನೀಡಿರುವುದಿಲ್ಲ. ಈ ಮೌನ ನಿರಾಶದಾಯಕ ಹಾಗೂ ವಲಸೆ ಕಾರ್ಮಿಕರ ಕುರಿತು ಸರಕಾರ ಹಾಗೂ ರಾಜಕೀಯ ಪಕ್ಷಗಳಲ್ಲಿರುವ ಅನಾದಾರವನ್ನು ಎತ್ತಿ ತೋರಿಸುತ್ತದೆ ಎಂದು ಡಿವೈಎಫ್‌ಐ ಸಂಘಟನೆಯು ತಿಳಿಸಿದೆ.

ದುರಂತಕ್ಕೆ ಕಂಪೆನಿ ಮಾತ್ರವಲ್ಲದೆ ಬಾಯ್ಲರ್ ಹಾಗೂ ಕಾರ್ಖಾನೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ ಸಹಿತ ಸರಕಾರದ ವಿವಿಧ ಇಲಾಖೆಗಳ ನಿರ್ಲಕ್ಷ್ಯ ಪ್ರಧಾನ ಕಾರಣವಾಗಿರುವುದರಿಂದ ರಾಜ್ಯ ಸರಕಾರವೂ ಈ ದುರಂತಕ್ಕೆ ಹೊಣೆ ಹೊತ್ತುಕೊಳ್ಳಬೇಕಿದೆ. ಜೀತಗಾರರ ರೀತಿ ದುಡಿದು ದಾರುಣವಾಗಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮೌನ ಮುರಿಯಬೇಕು ಹಾಗೂ ಕಂಪೆನಿಯು ಘೋಷಿಸಿರುವ 15 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ಸೇರಿದಂತೆ ರಾಜ್ಯ ಸರಕಾರ ಒಟ್ಟು ಪ್ರತಿ ಕುಟುಂಬಗಳಿಗೆ 50  ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ದುರಂತಕ್ಕೆ ಹೊಣೆಗಾರರಾದ ಹಾಗೂ ನಿರ್ಲಕ್ಷ್ಯ ವಹಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಬೇಕು. ಶ್ರೀ ಉಲ್ಕಾ ಕಂಪೆನಿಯ ಸೂಪರ್ ವೈಸರ್‌ಗಳನ್ನು ಬಂಧಿಸಿ, ಮಾಲಕನನ್ನು ರಕ್ಷಿಸಲು ಅವಕಾಶ ನೀಡಬಾರದು. ದುರಂತದ ಪ್ರಧಾನ ಆರೋಪಿಯಾಗಿರುವ ಶ್ರೀ ಉಲ್ಕಾ ಕಂಪಿನಿಯ ಮಾಲಕನನ್ನು ಸಹ ಬಂಧಿಸಬೇಕು ಹಾಗೂ ಎಸ್‌ಇಝಡ್‌ ಸಹಿತ ಮಂಗಳೂರಿನ ಕೈಗಾರಿಕಾ ಘಟಕಗಳಲ್ಲಿ ನಡೆಯುತ್ತಿರುವ ಕಾರ್ಮಿಕರ ಶೋಷಣೆ, ವಲಸೆ ಕಾರ್ಮಿಕರ ದುರ್ಬಳಕೆಗೆ ಅಂತ್ಯ ಹಾಡಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಆ ಕುರಿತು ಜಿಲ್ಲಾಡಳಿತ ಕಾರ್ಮಿಕ ಸಂಘಟನೆಗಳು, ಕೈಗಾರಿಕಾ ಸಂಘದ ಮುಖಂಡರ ಜಂಟಿ ಸಭೆಯನ್ನು ಕರೆಯಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ.

ಇದೇ ಸಂದರ್ಭದಲ್ಲಿ ಡಿವೈಎಫ್‌ಐ ಸಂಘಟನೆಯು ಮುಂದಿಟ್ಟಿರುವ ಬೇಡಿಕೆಗಳು ಈಡೇರದಿದ್ದಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಜೊತೆ ಸೇರಿ ಎಸ್‌ಇಝಡ್ ಚಲೋ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *