ಪಿಯು ಪರೀಕ್ಷಾ ಪ್ರವೇಶ ಪತ್ರ ನಿರಾಕರಣೆ – ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷಾ ಪ್ರವೇಶ ಪತ್ರವನ್ನು ನೀಡಲು ನಿರಾಕರಿಸಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಮನೋಜ್‌ (18) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪರೀಕ್ಷೆಯ ಹಾಲ್‌ ಟಿಕೆಟ್‌ ನಿರಾಕರಣೆ ಹಾಗೂ ಉಪನ್ಯಾಸಕರ ಥಳಿತವೇ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿ, ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಯನ್ನು ಅವಮಾನಿಸಿದ ಉಪನ್ಯಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಹಪಾಠಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಮನೋಜ್‌ ಶವವನ್ನು ಕಾಲೇಜು ಆವರಣಕ್ಕೆ ತಂದು ಆಕ್ರೋಶ ಹೊರಹಾಕಿದರು. ‘ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿದವರನ್ನು ಉಪನ್ಯಾಸಕರು ವಿನಾ ಕಾರಣಕ್ಕೆ ಥಳಿಸಿದರು. ಕೂದಲು ಹಿಡಿದು ಕಾರಿಡಾರ್‌ನಲ್ಲಿ ಎಳೆದಾಡಿದರು. ಇದರಿಂದ ಅವಮಾನಗೊಂಡ ಮನೋಜ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದು ಸಹಪಾಠಿಗಳು ಆರೋಪಿಸಿದರು.

ಘಟನೆಯ ಹಿನ್ನಲೆ : ಚಿತ್ರದುರ್ಗ ತಾಲ್ಲೂಕಿನ ದಂಡಿನಕುರುಬರಹಟ್ಟಿ ಗ್ರಾಮದ ಮನೋಜ್‌ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯು ವಿದ್ಯಾರ್ಥಿ. ಏ.22ರಿಂದ ಆರಂಭವಾಗಲಿರುವ ಅಂತಿಮ ಪರೀಕ್ಷೆಗಗೆ ಸಿದ್ಧತೆ ನಡೆಸಿದ್ದನು.

ಪರೀಕ್ಷೆಗೆ ಪ್ರವೇಶಾತಿ ಪತ್ರ ಮುಖ್ಯವಾಗಿದ್ದರಿಂದ ಪ್ರವೇಶಪತ್ರ ತರುಲು ಕಾಲೇಜಿಗೆ ಹೋಗಿದ್ದಾನೆ.ಆಗ ಗಣಿತ ವಿಭಾಗದ ಉಪನ್ಯಾಸಕ ಲೋಕೇಶಪ್ಪ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆದು, ಹಾಜರಾತಿ ಪ್ರಮಾಣ ಕಡಿಮೆ ಇದೆ, ಪ್ರವೇಶ ಪತ್ರ ಕೊಡಲ್ಲ ಎಂದು ಮನೋಜ್ ನ ತಲೆ ಕೂದಲನ್ನು ಹಿಡಿದು ಎಳೆದಾಡಿದ್ದಾರೆ.

‘ಕಾಲೇಜಿನಿಂದ ಮನೆಗೆ ಮರಳಿದ ಮನೋಜ್‌ ಮೌನವಾಗಿದ್ದನು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸೋಮವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಆತನನ್ನು ರಕ್ಷಿಸಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ’ ಎಂದು ಮನೋಜ್‌ ಸಹೋದರ ಮಂಜುನಾಥ್‌ ಮಾಹಿತಿ ನೀಡಿದರು.

ಕರೊನಾ ಹಿನ್ನೆಲೆ ಸರ್ಕಾರ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ತಡೆ ಹಿಡಿಯುವಂತಿಲ್ಲ. ಆದರೂ ನನ್ನ ಮಗನಿಗೆ ಅವಮಾನಿಸಿದ್ದಾರೆ ಎಂದು ಆಕ್ರೋಶಗೊಂಡ ಪೋಷಕರು ಕಾಲೇಜು ಆವರಣದಲ್ಲಿ ಶವ ಇಟ್ಟು ಆಕ್ರೋಶ ಹೊರಹಾಕಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *