ಜಹಾಂಗೀರ್ ಪುರಿ ಹಿಂಸಾಚಾರ-ಪೋಲೀಸ್‍ ಪಾತ್ರದ ಬಗ್ಗೆ ಸ್ವತಂತ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು: ಬೃಂದಾ ಕಾರಟ್

ಹೊಣೆಗಾರ ಪೋಲೀಸ್ ‍ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಬೇಕು -ದಿಲ್ಲಿ ಪೋಲೀಸ್ ಕಮಿಷನರರಿಗೆ ಪತ್ರ

ಏಪ್ರಿಲ್ 16 ರಂದು ದಿಲ್ಲಿಯ ಜಹಾಂಗೀರಪುರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ಘಟನೆಗಳನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿತ್ತು ಎಂದು ಹಲವಾರು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ವೀಡಿಯೊ ಚಿತ್ರಗಳಿಂದ ಮತ್ತು ಎಡಪಕ್ಷಗಳ ಸತ್ಯಶೋಧನಾ ತಂಡಕ್ಕೆ ಪ್ರತ್ಯಕ್ಷ  ಸಾಕ್ಷಿಗಳಿಂದ ಸಿಕ್ಕ ವರದಿಗಳಿಂದಲೂ ಎಂದು ಕಾಣುತ್ತದೆ. ಇವು ಇದರಲ್ಲಿ ಪೋಲೀಸರ ಪಾತ್ರಕ್ಕೆ ಸಂಬಂಧಿಸಿದಂತೆ ಹಲವು ಸಂದೇಹಗಳನ್ನು ಉಂಟುಮಾಡಿವೆ. ಈಗ ಇದರ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿದೆ. ಅದರೆ ಇದೂ  ಜಹಾಂಗೀರ್‌ಪುರಿ ಘಟನೆಯ ಪ್ರಕರಣದಲ್ಲಿ ಜವಾಬ್ದಾರರಾಗಿರುವ ಪೋಲಿಸ್ ಪಡೆಯ ಒಟ್ಟಾರೆ ಅಧಿಕಾರ ವ್ಯಾಪ್ತಿಗೇ ಒಳಪಟ್ಟಿರುವ ಸಂಸ್ಥೆ. ಆದ್ದರಿಂದ ಈ ಘಟನೆಗಳ ಬಗ್ಗೆ ಒಂದು  ನ್ಯಾಯಾಂಗ ತನಿಖೆ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯೆ ಬಂದಾಕಾರಟ್ ಹಾಗೂ ಕೇಂದ್ರ ಸಮಿತಿ ಸದಸ್ಯ ಮತ್ತು ದಿಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಂ.ತಿವಾರಿ ದಿಲ್ಲಿಯ ಪೋಲೀಸ್‍ ಕಮಿಷನರ್‍ ಅಸ್ಥಾನಾರವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಈ ನಡುವೆ,  ತಪ್ಪಿತಸ್ಥ ಪೋಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದೂ ಅವರನ್ನು ವಿನಂತಿಸಿದ್ದಾರೆ.

ಮೆರವಣಿಗೆಯಲ್ಲಿ ಆಯುಧಗಳನ್ನು ಒಯ್ಯಲು  ಅವಕಾಶ ನೀಡಿರುವ, ಸಮರ್ಪಕ ವ್ಯವಸ್ಥೆಗಳ ಕೊರತೆಗೆ ಕಾರಣರಾದ, ಮೆರವಣಿಗೆಯನ್ನು ಮಸೀದಿಯ ಮುಂದೆ ನಿಲ್ಲಿಸಲು ಅನುಮತಿ ನೀಡಿದ ಮತ್ತು ಏಕಪಕ್ಷೀಯವಾಗಿ ಪಕ್ಷಪಾತಪೂರ್ಣ ತನಿಖೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪತ್ರದಲ್ಲಿ ಈ ಇಬ್ಬರು ಮುಖಂಡರು ಆಗ್ರಹಿಸಿದ್ದಾರೆ. ಎರಡೂ ಸಮುದಾಯಗಳ ಜನರನ್ನು ಬಂಧಿಸಲಾಗಿದೆ ಎಂದು ಪೋಲೀಸ್‍ ಕಮಿಷನರ್‍ ಹೇಳಿದ್ದಾರೆ. ಆದರೆ ಘಟನೆಗಳು ನಡೆದಿರುವ ರೀತಿಯನ್ನು ನೋಡಿದರೆ ಇದರ ಮುಖ್ಯ ಪ್ರಚೋದನೆ ಮತ್ತು ಯೋಜನೆ ಮೆರವಣಿಗೆಯನ್ನು ನಡೆಸಿದ ಭಜರಂಗದಳದ ಅಂಗಸಂಘಟನೆಯದ್ದು ಎಂದು ಕಾಣಬರುತ್ತಿದ್ದರೂ ಬಂಧಿತರಲ್ಲಿ ಬಹುಪಾಲು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ ಎಂಬದನ್ನು ಈ ಪತ್ರ ಪೋಲೀಸ್‍ ಕಮಿಷನರ್‍ ರವರ ಗಮನಕ್ಕೆ ತಂದಿದೆ.

ಈ ಪತ್ರದ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:

ಆತ್ಮೀಯ ಶ್ರೀ ಅಸ್ಥಾನಾಜೀ,

ಏಪ್ರಿಲ್ 16 ರಂದು ಜಹಾಂಗೀರಪುರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ಸಂಪೂರ್ಣ ತಪ್ಪಿಸಬಹುದಾದ ಘಟನೆಗಳಲ್ಲಿ ಪೊಲೀಸರ ಪಾತ್ರಕ್ಕೆ ಸಂಬಂಧಿಸಿದಂತೆ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ. ಹಲವಾರು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ವೀಡಿಯೊ ಪುರಾವೆಗಳು ಮತ್ತು ನಮ್ಮ ಸತ್ಯಶೋಧನಾ ತಂಡಕ್ಕೆ ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿರುವ  ವರದಿಗಳು ಈ ಘಟನೆಗಳ ಬಗ್ಗೆ ತೀರ್ಮಾನಕ್ಕೆ ಬರಬಹುದಾದ ಪುರಾವೆಗಳನ್ನು  ಒದಗಿಸುತ್ತವೆ. ಈ ಮೆರವಣಿಗೆಯಲ್ಲಿ ಬಜರಂಗ ದಳದ ಯುವ ಘಟಕದ ಸದಸ್ಯರು ಸಶಸ್ತ್ರರಾಗಿದ್ದರು, ಹಲವರು ಖಡ್ಗಗಳನ್ನು, ಲಾಠಿಗಳನ್ನು ಬಹಿರಂಗವಾಗಿಯೇ ಝಳಪಿಸುತ್ತಿದ್ದರು ಮತ್ತು ಬಂದೂಕುಗಳನ್ನು ಪ್ರದರ್ಶಿಸುವ ಆಘಾತಕಾರಿ ದೃಶ್ಯಗಳೂ ಕಾಣ ಬಂದಿವೆ.  ಈ ಮೆರವಣಿಗೆಗೆ ತಮ್ಮ ಅನುಮತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡಿದ್ದರೇ? ವಾಸ್ತವವಾಗಿ ಶಸ್ತ್ರಾಸ್ತ್ರಗಳನ್ನು ಹೊತ್ತಿದ್ದ ಮೆರವಣಿಗೆಗಾರರು ಶಸ್ತ್ರಾಸ್ತ್ರ ಕಾಯಿದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ, ಇಂತಹ ಉಲ್ಲಂಘನೆಗಳಿಗೆ ಶಸ್ತ್ರಾಸ್ತ್ರ ಕಾಯಿದೆ ಜೈಲು ಶಿಕ್ಷೆಯ ಕಠಿಣ ನಿಬಂಧನೆಗಳನ್ನು ಹೊಂದಿದೆ, ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ  ವ್ಯಕ್ತಿಗಳನ್ನು ನೀವು ಗುರುತಿಸಿದ್ದೀರಾ ಮತ್ತು ಹಾಗಿದ್ದರೆ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆಯೇ ಎಂಬುದು ಮಾಧ್ಯಮಗಳಿಗೆ ನೀವು ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗುವುದಿಲ್ಲ. ಅಲ್ಲದೆ ಪೋಲೀಸರ ಪಾತ್ರದ ಬಗ್ಗೆ ಯಾವುದೇ ತನಿಖೆ  ನಡೆಯುತ್ತದೆಯೇ ಎಂಬುದೂ ಸ್ಪಷ್ಟವಾಗಿಲ್ಲ. ರೋಜಾ ಉಪವಾಸ ಮುರಿಯುವ ಪ್ರಾರ್ಥನೆಗಳು ಪ್ರಾರಂಭವಾಗಬೇಕಿದ್ದ ಸಮಯದಲ್ಲಿಯೇ ನಿಖರವಾಗಿ  ಸಶಸ್ತ್ರ ಮೆರವಣಿಗೆ ಮಸೀದಿಯ ಮುಂದೆ ನಿಲ್ಲಲು ಮತ್ತು ಪ್ರಚೋದನಕಾರಿ ಹಾಗೂ ಆಕ್ರಮಣಕಾರಿ ಘೋಷಣೆಗಳನ್ನು ಕೂಗಲು ಅವಕಾಶ ನೀಡಿರುವುದಕ್ಕೆ ಯಾರು ಹೊಣೆಗಾರರು? ಪೋಲೀಸರ ಲೋಪ-ದೋಷಪೂರಿತ ಉದ್ದೇಶಪೂರ್ವಕವಾದ  ಕೃತ್ಯಗಳ ನೇರ ಫಲಿತಾಂಶವಾಗಿ  ನಂತರದ ಘಟನೆಗಳು ಸಂಭವಿಸಿವೆ

ಕರ್ತವ್ಯ ನೆರವೇರಿಸುವ ವೇಳೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದು ಅತ್ಯಂತ ದುರದೃಷ್ಟಕರ. ಆದರೆ ಮೆರವಣಿಗೆಗೆ ಅನುಮತಿ ನೀಡುವ ಮುನ್ನ ಈ ಪ್ರಧೇಶದ  ಹಿರಿಯ ಅಧಿಕಾರಿಗಳು ಅಗತ್ಯನಿಗಾ ವಹಿಸಿದ್ದರೆ, ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಿದ್ದರೆ, ಆಯುಧಗಳನ್ನು ಹಿಡಿದಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದರೆ, ಮಸೀದಿಯ ಮುಂದೆ ಮೆರವಣಿಗೆಯನ್ನು ನಿಲ್ಲಿಸಲು ಅವಕಾಶ ನೀಡದೇ ಇದ್ದಿದ್ದರೆ ಈ ಘಟನೆಗಳು ನಡೆಯುತ್ತಿರಲಿಲ್ಲ. ಈ ಪ್ರದೇಶದಲ್ಲಿ ಹಿಂದೆಂದೂ ಕೋಮುವಾದಿ ಸ್ವರೂಪದ  ಘಟನೆಗಳು ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಎರಡು ಸಮುದಾಯಗಳು ಸಾಮರಸ್ಯದಿಂದ ಒಟ್ಟಾಗಿ ಬಾಳಿವೆ. ಶೋಭಾ ಯಾತ್ರೆಯ ಹೆಸರಿನಲ್ಲಿ ನಡೆದ ಮೆರವಣಿಗೆಯಲ್ಲಿ ಹೊರಗಿನವರು ಈ ಘಟನೆಗಳನ್ನು ಸೃಷ್ಟಿಸಿದ್ದಾರೆ  ಎಂಬುದಕ್ಕೆ ಇದು ಇನ್ನಷ್ಟು ಪುರಾವೆ ನೀಡುತ್ತದೆ.

ರಾತ್ರಿ ವೇಳೆ ಸಿ ಬ್ಲಾಕ್‌ನ ಮನೆಗಳ ಮೇಲೆ ದಾಳಿ ನಡೆಸುತ್ತ ಪುರುಷ ಪೊಲೀಸರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಥಳಿಸಿದ್ದಾರೆ ಎಂಬ ಮಾಹಿತಿಯೂ ನಮಗೆ ಲಭ್ಯವಾಗಿದೆ. ಇದು ಪುರುಷ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಸ್ಪರ್ಶಿಸುವುದನ್ನು ನಿಷೇಧಿಸುವ ಎಲ್ಲಾ ನಿಬಂಧನೆಗಳು ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗಿದೆ. 17 ರಂದು ಜಹಾಂಗೀರ್‌ಪುರಿ ಪೋಲೀಸ್‍ ಸ್ಟೇಷನಿನಲ್ಲಿ  ಹೆಚ್ಚುವರಿ ಡಿಸಿಪಿ ಶ್ರೀ ಕಿಶನ್ ಕುಮಾರ್ ಅವರನ್ನು ನಮ್ಮ ತಂಡದವರು ಇತರರೊಂದಿಗೆ ಭೇಟಿಯಾದಾಗ, ಬಿಜೆಪಿಯ ಮುಖಂಡರು ಠಾಣೆಯ ಆವರಣದೊಳಗೇ  ಪತ್ರಿಕಾಗೋಷ್ಠಿ ನಡೆಸುತ್ತಿರುವುದನ್ನು ಕಂಡು ಆಘಾತಕ್ಕೊಳಗಾದರು. ಇದು ಅತ್ಯಂತ ನಿಯಮಬಾಹಿರವಾಗಿದೆ ಮತ್ತು ಪ್ರಸ್ತುತ ಪ್ರಕರಣದಲ್ಲಿ ಪೊಲೀಸ್ ಪಾತ್ರ ಸಂಪೂರ್ಣವಾಗಿ ಏಕಪಕ್ಷೀಯ ಮತ್ತು ಪಕ್ಷಪಾತದ್ದಾಗಿದೆ ಎಂಬ ಸಂದೇಹವನ್ನು  ಬಲಪಡಿಸುತ್ತದೆ.

ಈ ಪತ್ರವನ್ನು (1) ಮೆರವಣಿಗೆಯಲ್ಲಿ ಆಯುಧಗಳನ್ನು ಹಿಡಿದಿರಲು ಅವಕಾಶ ನೀಡಿದ (2) ಸಾಕಷ್ಟು ಬಂದೋಬಸ್ತಿನ ಕೊರತೆಗೆ ಕಾರಣರಾದ (3) ಮೆರವಣಿಗೆಯನ್ನು ಮಸೀದಿಯ ಮುಂದೆ ನಿಲ್ಲಿಸಲು ಅನುಮತಿ ನೀಡಿದ ಮತ್ತು 4) ಏಕಪಕ್ಷೀಯ ಪಕ್ಷಪಾತದ ತನಿಖೆ ನಡೆಸುತ್ತಿರುವ ಪೋಲೀಸ್‍ ‍ಸಿಬ್ಬಂದಿಯ ವಿರುದ್ಧ ಕ್ರ ಕೈಗೊಳ್ಳಬೇಕು ಎಂದು ಮನವಿ ಮಾಡಲು  ಬರೆಯುತ್ತಿದ್ದೇವೆ. ಎರಡೂ ಸಮುದಾಯಗಳ ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದೀರಿ. ಎಲ್ಲ ತಪ್ಪಿತಸ್ಥರ ಬಂಧನ ಮತ್ತು ಶಿಕ್ಷೆ ಆಗಬೇಕು ಎಂಬುದು ನಮ್ಮ ನಿಲುವು ಕೂಡ. ಆದಾಗ್ಯೂ ಬಹುಪಾಲು ಬಂಧನಗಳು ಅಲ್ಪಸಂಖ್ಯಾತ ಸಮುದಾಯದಲ್ಲಿ ನಡೆದಿವೆ,  ಆದರೆ ಘಟನೆಗಳು ಸಾಗಿದ ದಾರಿ ಪ್ರಮುಖ ಪ್ರಚೋದನೆಗಳು ಮತ್ತು ಯೋಜನೆ ಮೆರವಣಿಗೆಯನ್ನು ನಡೆಸಿದ ಸಂಘಟನೆಯದ್ದು,  ಪೋಲೀಸರೇ ಹೇಳಿರುವಂತೆ ಬಜರಂಗ ದಳದ ಅಂಗಸಂಸ್ಥೆಯದ್ದು ಎಂದು ತೋರಿಸುತ್ತವೆ.

ತನಿಖೆಯನ್ನು ಯಾರಿಗೆ ಹಸ್ತಾಂತರಿಸಲಾಗಿದೆಯೋ ಆ ಕ್ರೈಂ ಬ್ರಾಂಚ್ ಜಹಾಂಗೀರ್‌ಪುರಿ ಘಟನೆಯ ಪ್ರಕರಣದಲ್ಲಿ ಜವಾಬ್ದಾರರಾಗಿರುವ ಪೋಲಿಸ್ ಪಡೆಯ ಒಟ್ಟಾರೆ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಕಾರಣಕ್ಕಾಗಿಯೇ ಸಿಪಿಐ(ಎಂ) ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯಾಂಗ ತನಿಖೆ/ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ. ಈ ನಡುವೆ ಇದಕ್ಕೆ ಹೊಣೆಗಾರರಾದ  ಪೋಲೀಸರ ವಿರುದ್ಧ ಕ್ರಮ ಜರುಗಿಸಬೇಕಾಗಿ ತಮ್ಮನ್ನು ವಿನಂತಿಸಿಕೊಳ್ಳುತ್ತೇವೆ..

Donate Janashakthi Media

Leave a Reply

Your email address will not be published. Required fields are marked *