ತಿರುವನಂತಪುರ: ಕೇರಳದ ನಿಗದಿತ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಮೇ 20ರಿಂದ ಬ್ಯಾಂಕಿಂಗ್ ಹಾಗೂ ಇತರ ಸೇವೆಗಳು ಲಭ್ಯವಾಗಲಿವೆ. ರಾಜ್ಯದಲ್ಲಿ ಸರಿಸುಮಾರು 14 ಸಾವಿರಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ ಆರಂಭಿಕವಾಗಿ 800ರಷ್ಟು ಅಂಗಡಿಗಳಲ್ಲಿ ಹೆಚ್ಚುವರಿ ಸೇವೆ ನೀಡಲು ಮಾಲಕರು ಕೊಂಡಿದ್ದಾರೆ.
ಕೇರಳ ಎಡರಂಗ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್. ಅನಿಲ್ ಅಧ್ಯಕ್ಷತೆಯಲ್ಲಿ ಈ ವಾರ ಸಭೆ ನಡೆಯಲಿದ್ದು, ಅಂತಿಮ ರೂಪ ಸಿಗಲಿದೆ. ಯೋಜನೆಯು ಪಡಿತರ ಅಂಗಡಿಗಳನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಇಲಾಖೆ ಯೋಜಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಪಡಿತರ ಅಂಗಡಿ ಸೌಲಭ್ಯವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಬುಡಕಟ್ಟು ಕುಗ್ರಾಮಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದರು ಮತ್ತು ಬಡತನದ ವರ್ಗದಲ್ಲಿರುವವರು ಪಡಿತರವನ್ನು ಖರೀದಿಸಲು ಪಡಿತರ ಮಳಿಗೆಗಳನ್ನು ತಲುಪಲು ಸಾಧ್ಯವಾಗದಿರುವುದು ಕಂಡುಬಂದ ನಂತರ ಸರ್ಕಾರವು ಸ್ಥಳೀಯ ಪಡಿತರ ಅಂಗಡಿಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದು ಪ್ರಮುಖ ಪ್ರಸ್ತಾಪವಾಗಿದೆ. ಬ್ಯಾಂಕಿಂಗ್ ಸೇವೆ ನೀಡಲು ನಾಲ್ಕು ಬ್ಯಾಂಕುಗಳು ಆಸಕ್ತಿ ತೋರಿಸಿವೆ. ಇಲ್ಲಿ ವಿದ್ಯುತ್ ಹಾಗೂ ನೀರಿನ ಬಿಲ್ ಸಂಗ್ರಹ, ದಿನಸಿ ವಸ್ತು ಮಾರಾಟ ಸೇರಿದಂತೆ ವಿವಿಧ ಯೋಜನೆಗಳು ಜಾರಿಯಾಗಲಿವೆ. ವರ್ಷಾಂತ್ಯದ ಒಳಗೆ 1,000 ರೇಷನ್ ಅಂಗಡಿಗಳಿಗೆ ಈ ಸೇವೆ ವಿಸ್ತರಣೆಯಾಗುವ ನಿರೀಕ್ಷೆಯಿದೆ.