ಬೆಂಗಳೂರು: ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದು, ಇದರೊಂದಿಗೆ ಜೆಡಿಎಸ್ ಪಕ್ಷ ಸೇರಿದ ಬಳಿಕ ಸಿ. ಎಂ. ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಇಂದು(ಏಪ್ರಿಲ್ 17) ಜೆಡಿಎಸ್ ಪಕ್ಷದ ಕಚೇರಿ ಜೆ. ಪಿ. ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿ. ಎಂ. ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಗೊಳ್ಳವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡರು.
ಇದನ್ನು ಓದಿ: ರಾಜ್ಯಾಧ್ಯಕ್ಷರಾಗಿ ಜೆಡಿಎಸ್ ಪಕ್ಷಕ್ಕೆ ಸಿ.ಎಂ.ಇಬ್ರಾಹಿಂ ಅಧಿಕೃತ ಸೇರ್ಪಡೆ
ಸಿ. ಎಂ. ಇಬ್ರಾಹಿಂ ಅವರಿಗೆ ನಿಕಟಪೂರ್ವ ಅಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಿದರು. ಈ ಮೂಲಕ ಜೆಡಿಎಸ್ ಪಕ್ಷ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದಲ್ಲಿ ಭಾರೀ ಬದಲಾವಣೆ ಮಾಡಿದೆ.
ಸಿ. ಎಂ. ಇಬ್ರಾಹಿಂಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಎಚ್. ಕೆ. ಕುಮಾರಸ್ವಾಮಿ ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಚ್. ಡಿ. ಕುಮಾರಸ್ವಾಮಿ ಸಿ ಎಂ ಇಬ್ರಾಹಿಂ ಹಾಗೂ ಎಚ್ ಕೆ ಕುಮಾರಸ್ವಾಮಿ ಅವರಿಗೆ ಅಭಿನಂದಿಸಿದರು.
ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, “ಎಚ್. ಕೆ. ಕುಮಾರಸ್ವಾಮಿ ಅವರು ಎರಡೂವರೆ ವರ್ಷಗಳ ಅಂತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ. ಸಿ. ಎಂ. ಇಬ್ರಾಹಿಂ ಪಕ್ಷಕ್ಕೆ ಮರಳಿ ಬಂದಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರನ್ನು ರಾಜ್ಯಧ್ಯಕ್ಷರಾಗಿ ನೇಮಕ ಮಾಡಲಾಗಿದೆ” ಎಂದರು.